ಹುಬ್ಬಳ್ಳಿ: ಭಾರತರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಜಗತ್ತಿಗೆ ಮಾದರಿಯಾದ ಸಂವಿಧಾನವನ್ನು ನಮಗೆ ಕೊಟ್ಟಿದ್ದಾರೆ. ಇದರಿಂದಾಗಿ ನಮ್ಮ ಪ್ರಜಾತಂತ್ರ ವ್ಯವಸ್ಥೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.
ಇಲ್ಲಿಯ ನೆಹರು ಮೈದಾನದಲ್ಲಿ ಬುಧವಾರ ತಾಲೂಕಾಡಳಿತದ ವತಿಯಿಂದ ಏರ್ಪಡಿಸಿದ್ದ 73ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಬ್ಬ ಬಡ ವ್ಯಕ್ತಿಯೂ ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಬಹುದು ಎನ್ನುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಸಾಕ್ಷಿ. ಅಂತಹ ಅದ್ಭುತ ಶಕ್ತಿ ಸಂವಿಧಾನಕ್ಕೆ ಇದೆ. ಕಳೆದ ಏಳು ವರ್ಷಗಳಲ್ಲಿ ಮೋದಿ ಅವರ ನೇತೃತ್ವದಲ್ಲಿ ದೇಶ ಆರ್ಥಿಕ ಅಭಿವೃದ್ಧಿ ಸಾಧಿಸಿದೆ ಎಂದರು.
ಕರೊನಾ ಹಿನ್ನೆಲೆಯಲ್ಲಿ ಜೀವನ ಹಾಗೂ ಜೀವ ಎರಡನ್ನೂ ಉಳಿಸಿಕೊಂಡು ಹೋಗಬೇಕಿದೆ. ಜಿಲ್ಲೆಯ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಕಾಮಗಾರಿಗೆ ಇನ್ನಷ್ಟು ವೇಗ ನೀಡಬೇಕು. ನಿರಂತರ ನೀರು ಯೋಜನೆ ಸಾಕಾರಗೊಳ್ಳುತ್ತಿದೆ. ತುಪ್ಪರಿ- ಬೆಣ್ಣಿ ಹಳ್ಳ ಯೋಜನೆಯ ಡಿಪಿಆರ್ ಸಿದ್ಧಗೊಂಡಿದ್ದು, ರಾಜ್ಯ ಸರ್ಕಾರದ ಅನುಮೋದನೆಯೊಂದಿಗೆ ಶೀಘ್ರ ಜಾರಿಯಾಗಲಿದೆ ಎಂದು ಶೆಟ್ಟರ್ ಹೇಳಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ವಿಶ್ವವೇ ಮೆಚ್ಚುವಂತ ಶ್ರೇಷ್ಠ ಸಂವಿಧಾನವನ್ನು ಡಾ. ಅಂಬೇಡ್ಕರ್ ಅವರು ಕೊಟ್ಟರು. ಏಳು ದಶಕಗಳ ನಿರಂತರ ಪರಿಶ್ರಮದ ಫಲವಾಗಿ ದೇಶ ಇಂದು ಅಭಿವೃದ್ಧಿ ಕಾಣುತ್ತಿದೆ ಎಂದರು.
ಹೊಸ ಶಿಕ್ಷಣ ನೀತಿಯ ಹೆಸರಲ್ಲಿ ಹಬ್ಬ- ಹರಿದಿನಗಳನ್ನು ಪಠ್ಯದಲ್ಲಿ ಸೇರಿಸಲಾಗುತ್ತಿದೆ. ಆದರೆ, ರಾಜೀವ ಗಾಂಧಿ ಅವರು ಅಂದಿನ ಶಿಕ್ಷಣ ನೀತಿಯಲ್ಲಿ ವೈಜ್ಞಾನಿಕ ಚಿಂತನೆಗೆ ಮಹತ್ವ ನೀಡಿದ್ದರು ಎಂದು ಅಬ್ಬಯ್ಯ ಹೇಳಿದರು.
ಆರ್ಎಸ್ಐ ಭಾಗಣ್ಣ ವಾಲಿಕಾರ ನೇತೃತ್ವದಲ್ಲಿ ಪೊಲೀಸ್ ದಳ, ಜಿ.ಡಿ. ಮುದ್ನೂರ ನೇತೃತ್ವದಲ್ಲಿ ಹೋಂ ಗಾರ್ಡ್ ದಳ ಹಾಗೂ ಪೊಲೀಸ್ ಬ್ಯಾಂಡ್ ಪಥಸಂಚಲನ ನಡೆಯಿತು. ಫಾತೀಮಾ ಪ್ರೌಢಶಾಲೆ ತಂಡದವರು ನಾಡಗೀತೆ ಮತ್ತು ರೈತಗೀತೆ ಪ್ರಸ್ತುತ ಪಡಿಸಿದರು. ಶಾಸಕ ಪ್ರದೀಪ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ, ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ಇತರರು ಭಾಗವಹಿಸಿದ್ದರು.
ಆಸ್ತಿ ದಾಖಲೆ ಕಾರ್ಡ್ ವಿತರಣೆ
ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ನಗರ ತಹಸೀಲ್ದಾರ್ ಶಶಿಧರ ಮಾಡ್ಯಾಳ ಅವರು, ತಾಲೂಕಿನಲ್ಲಿ ‘ಸ್ವಾಮಿತ್ವ ಯೋಜನೆ’ ಕಾರ್ಯ ರೂಪಕ್ಕೆ ತರಲಾಗಿದೆ. ತಾಲೂಕಿನ 35 ಗ್ರಾಮಗಳ ಪೈಕಿ 9 ಗ್ರಾಮಗಳ 5,212 ಆಸ್ತಿಗಳ ಡ್ರೋನ್ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಮುಂದಿನ 3 ತಿಂಗಳಲ್ಲಿ ಉಳಿದ ಗ್ರಾಮಗಳ 15 ಸಾವಿರ ಆಸ್ತಿ ಸರ್ವೆ ಮಾಡಿ ಗ್ರಾಮ ಪಂಚಾಯಿತಿ ಮೂಲಕ ಆಸ್ತಿ ದಾಖಲೆಗಳ ಕಾರ್ಡ್ಗಳನ್ನು ವಿತರಿಸಲಾಗುವುದು ಎಂದು ಹೇಳಿದರು.