ಜಿಲ್ಲೆ

ಭಾರತದಲ್ಲಿ ಸಂಸ್ಕೃತಿ, ಸಂಸ್ಕಾರಕ್ಕೆ ವಿಶೇಷ ಗೌರವ

ಸಿದ್ದಾಪುರ: ದೇಶದ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ, ಸಂಪ್ರದಾಯಕ್ಕೆ ಪ್ರಪಂಚದಾದ್ಯಂತ ವಿಶೇಷವಾದ ಗೌರವವಿದೆ ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಲಕ್ಷದ್ವೀಪದ ಪ್ರಧಾನ ಕಾರ್ಯದರ್ಶಿ ಎ.ಟಿ. ದಾಮೋದರ ಹೇಳಿದರು.

ತಾಲೂಕಿನ ಸಂಪಗೋಡ ಗ್ರಾಮದ ಶ್ರೀ ಸಂಸ್ಥಾನ ತರಳೀ ಮಠದಲ್ಲಿ 32ನೇ ಮಹಾಶಿವರಾತ್ರಿ ಅಂಗವಾಗಿ ಆಯೋಜಿಸಿದ್ದ ತರಳೀ ಶ್ರೀ ಪ್ರಶಸ್ತಿ ಹಾಗೂ ನಾರಾಯಣ ಗುರು ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.

ಭಾರತದಲ್ಲಿ ವೈವಿಧ್ಯತೆ ಇದೆ. ಆದರೆ, ವಿದೇಶದಲ್ಲಿ ವೈವಿಧ್ಯತೆ ಇಲ್ಲ. ಭಾರತದ ಪ್ರತಿಯೊಂದು ಹಳ್ಳಿಯಲ್ಲಿ ವಿವಿಧ ಸಂಸ್ಕೃತಿ ಇದೆ. ಇದರಿಂದಲೇ ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಹಿಂದುಳಿದ ಸಮಾಜದವರು ಮುಂದುವರಿದ ಸಮಾಜವನ್ನು ಗೌರವಿಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಸಾವಿರಾರು ವರ್ಷಗಳ ಇತಿಹಾಸ ಇರುವ ತರಳೀ ಮಠದ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಶಿರಸಿ ಹಿರಿಯ ಸಿವಿಲ್ ನ್ಯಾಯಾಧೀಶೆ ಸುನೀತಾ ಮಾತನಾಡಿ, ಸಮಾಜದಲ್ಲಿ ಕೆಳವರ್ಗ, ಮೇಲ್ವರ್ಗ ಎನ್ನುವುದಿಲ್ಲ.ಜಾತಿ, ಮತ ಬೇದ ಇಲ್ಲದೇ ಎಲ್ಲರೂ ಒಂದಾಗಿ ಬದುಕುವುದನ್ನು ಕಲಿತುಕೊಳ್ಳಬೇಕು. ಶಿವರಾತ್ರಿ ಪವಿತ್ರ ದಿನವಾಗಿದೆ ಎಂದು ಹೇಳಿದರು.

ತರಳೀ ಶ್ರೀ ಪ್ರಶಸ್ತಿ: ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಪ್ರಹ್ಲಾದ ಟಿ. ಕಟ್ಟಿಮನಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಪರ ಜಿಲ್ಲಾಧಿಕಾರಿ ಮಂಜುನಾಥ ಜಿ.ಎನ್, ಮುಡುಬದ ಖ್ಯಾತ ನಾಟಿ ವೈದ್ಯ ಡಾ.ಎಚ್.ಸಿ. ಈಶ್ವರ ನಾಯ್ಕ, ಶಿರಸಿ ವಿಜಯಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕಿ ನಾಗವೇಣಿ ಕುಳಗದ್ ಅವರಿಗೆ ತರಳೀ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಾರಾಯಣ ಗುರು ಪುರಸ್ಕಾರ: ರಜನಿ ಈಶ್ವರ ನಾಯ್ಕ ಕಾನಗೋಡ, ಜಿ. ಸಂದೇಶಕುಮಾರ ಗೋಳಗೋ ಅವರಿಗೆ ನಾರಾಯಣಗುರು ಪುರಸ್ಕಾರ ನೀಡಲಾಯಿತು. ಜಿಪಂ ಸದಸ್ಯರಾದ ನಾಗರಾಜ ನಾಯ್ಕ ಬೇಡ್ಕಣಿ, ಸುಮಂಗಲಾ ವಸಂತ ನಾಯ್ಕ, ಎಚ್.ಎಸ್.ನಾಯ್ಕ, ವ್ರತ ಕಮಿಟಿ ಅಧ್ಯಕ್ಷ ತಿಮ್ಮಪ್ಪ ಜಟ್ಯಾ ನಾಯ್ಕ ಬೂದಗಿತ್ತಿ ಇತರರಿದ್ದರು

ಬೆಳಗ್ಗೆ ಮಠದಲ್ಲಿ 1008 ಶ್ರೀ ಸತ್ಯನಾರಾಯಣ ವ್ರತ ಕಲಶ ಪೂಜೆ ನಡೆಯಿತು. ಮಠದ ಆಡಳಿತ ಕಮಿಟಿ ಅಧ್ಯಕ್ಷ ಎನ್.ಡಿ. ನಾಯ್ಕ ಐಸೂರು ಸ್ವಾಗತಿಸಿದರು. ಎ.ಕೆ. ಕರುಣಾಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರ ನಾಯ್ಕ ಮನಮನೆ ವಂದಿಸಿದರು. ಎಂ.ಕೆ.ನಾಯ್ಕ ಹೊಸಳ್ಳಿ ನಿರ್ವಹಿಸಿದರು.