ಮುಗನೂರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಅನಾವರಣ ಹಾಗೂ ೧೩೪ನೇ ಜಯಂತಿ ಕಾರ್ಯಕ್ರಮವನ್ನು ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಉದ್ಘಾಟಿಸಿದರು. ಭಂತೆ ಜ್ಞಾನಸಾಗರ, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಮಾಜಿ ಸಂಸದ ಭಗವಂತ ಖೂಬಾ, ಎಂಎಲ್‌ಸಿ ಎಂ.ಜಿ.ಮುಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಬಸವರಾಜ ಆರ್ಯ ಇತರರಿದ್ದರು. 
ಜಿಲ್ಲೆ

ಭಾರತದ ಸೂರ್ಯ ಡಾ.ಬಿ.ಆರ್.ಅಂಬೇಡ್ಕರ್

ಹುಮನಾಬಾದ್: ಭಾರತಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರೇ ಸೂರ್ಯ ಇದ್ದಂತೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಮುಗನೂರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ನೂತನ ಮೂರ್ತಿ ಅನಾವರಣ ಹಾಗೂ ೧೩೪ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸಂವಿಧಾನದ ಮೂಲಕ ಸಮಾನತೆ ನೀಡಿದ ಅಂಬೇಡ್ಕರ್ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಪುಟ್ಟ ಗ್ರಾಮ ಮುಗನೂರದಲ್ಲಿ ಅಂಬೇಡ್ಕರ್ ಮೂರ್ತಿ ಅನಾವರಣಕ್ಕೆ ನನ್ನನ್ನು ಶಾಸಕ ಡಾ.ಪಾಟೀಲ್ ಆಹ್ವಾನಿಸಿರುವುದು ಸಂತಸ ತಂದಿದೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ ಎಂದು ಕಾಂಗ್ರೆಸಿಗರು ಕೂಗಾಡುತ್ತಾರೆ. ಅಂಬೇಡ್ಕರ್ ಅವರಿಗೆ ಎರಡು ಬಾರಿ ಸೋಲಿಸಿದವರೇ ಬಿಜೆಪಿ ವಿರುದ್ಧ ಸುಳ್ಳು ಹೇಳುತ್ತಾರೆ. ಅಂಬೇಡ್ಕರ್‌ಗೆ ಅವಮಾನವಾಗಿದ್ದು ೬೫ ವರ್ಷ ಆಳಿದ ಕಾಂಗ್ರೆಸ್‌ನಿಂದಲೇ ಹೊರತು, ೧೦ ವರ್ಷದಿಂದ ಅಧಿಕಾರ ನಡೆಸುತ್ತಿರುವ ಬಿಜೆಪಿಯಿಂದಲ್ಲ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಅವರೇ ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ಅಂಬೇಡ್ಕರ್ ಅವರನ್ನು ಬಿಟ್ಟು ರಾಜಕೀಯ ಉಳಿದಿಲ್ಲ. ಎಲ್ಲ ಪಕ್ಷಕ್ಕೂ ಅವರು ಬೇಕೇಬೇಕು. ಬಾಬಾಸಾಹೇಬ್ ಬಿಟ್ಟು ಈ ದೇಶ ನಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿ, ಸೂರ್ಯ-ಚಂದ್ರ ಇರುವವರೆಗೆ ಡಾ.ಅಂಬೇಡ್ಕರ್ ಹಾಗೂ ಅವರು ನೀಡಿರುವ ಸಂವಿಧಾನ ಉಳಿಯಲಿದೆ. ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸಿಗರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡಲಿದೆ ಎಂದು ಸುಳ್ಳು ಹೇಳುತ್ತಲೇ ಬಂದಿದ್ದಾರೆ ಕಿಡಿಕಾರಿದರು.

ಭಂತೆ ಜ್ಞಾನಸಾಗರ, ಭಂತೆ ಧಮ್ಮಾನಂದ ಇತರ ಭಂತೇಜಿ ಸಾನ್ನಿಧ್ಯ ವಹಿಸಿದ್ದರು. ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಬಸವರಾಜ ಆರ್ಯ, ಪ್ರಮುಖರಾದ ಸುಭಾಷ ಗಂಗಾ, ಶಿವರಾಜ ಚೀನಕೇರಾ, ಮಾಣಿಕ ಪವಾರ್, ಅಂಕುಶ ಗೋಖಲೆ, ಲಕ್ಷ್ಮೀಪುತ್ರ ಮಾಳಗೆ, ಗೌತಮ ಸೆಡೋಳ ಇತರರಿದ್ದರು. ಕಾರ್ಯಕ್ರಮ ವೇಳೆ ಮಳೆ ಸುರಿಯಲು ಆರಂಭಿಸಿದ್ದರಿಂದ ಕೆಲ ಪ್ರಮುಖರ ಭಾಷಣವನ್ನು ಮೊಟಕುಗೊಳಿಸಲಾಯಿತು.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಜನಿಸಿದ, ಶಿಕ್ಷಣ ಪಡೆದ, ಅಂತ್ಯಕ್ರಿಯೆ, ಬೌದ್ಧ ಧರ್ಮ ಸೇರಿ ಪಂಚ ಕ್ಷೇತ್ರದ ಅಭಿವೃದ್ಧಿಪಡಿಸಿ ಅಂತಾರಾಷ್ಟ್ರೀಯ ಮಟ್ಟದ ಸ್ಮಾರಕವಾಗಿಸಿ ಗೌರವ ನೀಡಿದ್ದಾರೆ. ಇದರಿಂದ ಗೌರವಿಸವವರು ಯಾರು? ಮೋಸ ವಂಚನೆ ಮಾಡಿದವರಾರು ಎಂಬುದನ್ನು ದಲಿತರು ಅರ್ಥ ಮಾಡಿಕೊಳ್ಳಬೇಕು.

| ಛಲವಾದಿ ನಾರಾಯಣಸ್ವಾಮಿ ಮೇಲ್ಮನೆ ವಿಪಕ್ಷ ನಾಯಕ

ಡಾ.ಬಿ.ಆರ್.ಅಂಬೇಡ್ಕರ್ ದೇಶದ ಮಹಾಶಕ್ತಿ ಇದ್ದಂತೆ. ಅವರು ನೀಡಿರುವ ಶಿಕ್ಷಣ, ಸಂಘಟನೆ, ಹೋರಾಟ ತತ್ವಗಳನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ. ಊರಲ್ಲಿ ಸುಂದರವಾದ ಅಂಬೇಡ್ಕರ್ ಮೂರ್ತಿ ಅನಾವಣಗೊಂಡಿರುವುದು ಸಂತಸ ತಂದಿದೆ.

| ಡಾ.ಸಿದ್ದಲಿಂಗಪ್ಪ ಪಾಟೀಲ್ ಶಾಸಕ