ಹಾಸನ: ವಿವೇಕಾನಂದ ಸ್ಮರಣೆಯೇ ಒಂದು ರೋಮಾಂಚನ ಭಾರತದ ಸನಾತನ ಸಂಸ್ಕೃತಿಯನ್ನು ವಿಶ್ವಕ್ಕೆ ಸಾರಿದ ವೀರ ಸನ್ಯಾಸಿ, ಅವರು ಇಡೀ ಜಗತ್ತಿನ ಯುವ ಸಮುದಾಯಕ್ಕೆ ಚೈತನ್ಯ ಶಕ್ತಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್ ತಿಳಿಸಿದರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ, ಧ್ವನಿ ಸಾಂಸ್ಕೃತಿಕ ಯುವಕ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದ ಚಿಕಾಗೊದಲ್ಲಿ ಮಾಡಿದ ಭಾಷಣ ಒಂದು ಇತಿಹಾಸ ಸೃಷ್ಟಿಸಿದ್ದು, ಇಡೀ ಜಗತ್ತಿಗೆ ಭ್ರಾತೃತ್ವದ ಮಹತ್ವವನ್ನು ಆ ಮೂಲಕ ಯುವ ಜನತೆಗೆ ಸಾರಿ, ಯುವ ಜನಶಕ್ತಿಯ ಬಗ್ಗೆ ಪ್ರೆರಣಾ ಪೂರ್ವಕ ಅರಿವನ್ನು ಮೂಡಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ.ಅವರಂತೆ ನಾವು ದೇಶದ ಅಭಿವೃದ್ಧಿಗೆ ನಮ್ಮ ಯುವ ಸಮುದಾಯದ ಸಾಮರ್ಥ್ಯ ಬಳಸಿಕೊಂಡು ಸಮಾಜದಲ್ಲಿ ಉತ್ತಮ ಮನಸ್ಥಿತಿಯನ್ನು ನಿರ್ಮಿಸಬೇಕು. ಹಾಗಾಗಿ ಪ್ರತಿಯೊಬ್ಬ ಯುವಕರು ನಮ್ಮ ಸಂಸ್ಕೃತಿಯ ಹಿರಿಮೆ ಅರಿತು, ಉಳಿಸಿ ಬೆಳೆಸುತ್ತಾ ದೇಶ ಕಟ್ಟುವ ನಿಟ್ಟಿನಲ್ಲಿ ರಚನಾತ್ಮಕ ಬದಲಾವಣೆ ಹೊಂದಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೋ. ಮಲ್ಲೇಶ್ ಗೌಡ ಮಾತನಾಡಿ, ಸ್ವಾಮಿ ವಿವೇಕಾನಂದರು ನಮ್ಮೆಲ್ಲರ ಸಾಕ್ಷಿ ಪ್ರಜ್ಞೆ. ಯುವ ಸಮುದಾಯದ ಮೇಲೆ ಅಪಾರ ನಂಬಿಕೆ ಹೊದಿದ್ದರು ಆದರೆ ಇಂದಿಗೂ ಅವರ ಆಶಯ ಅನುಷ್ಠಾನವಾಗಿಲ್ಲ ಎಂದು ವಿಷಾದಿಸಿದರು.
ಮೌಲ್ವಿಕ ಜೀವನ ಬದಲಾಗಿದೆ ಯುವ ಸಮುದಾಯ ತಾಳ್ಮೆ ಕಳೆದುಕೊಳ್ಳುತ್ತಾ ಪಾಶ್ಚಿಮಾತ್ಯ ಸಂಸ್ಕೃತಿಗೆ ಜೋತು ಬೀಳುತ್ತಿದ್ದಾರೆ ಇದಕ್ಕೆ ಪೋಷಕರೂ ಕಾರಣವಾಗಿದ್ದಾರೆ . ಗುಣ ಸಿರಿವಂತಿಕೆ ಬಿತ್ತುವಲ್ಲಿ ವಿಫಲರಾಗಿ ತಾಂತ್ರಿಕ ಬದುಕಿಗೆ ದೂಡಲಾಗುತ್ತಿದೆ ಇದು ಈಗಲಾದರೂ ಬದಲಾಗಬೇಕು. ಮಕ್ಕಳು ಪೋಷಕರ ನಡವಳಿಕೆಯನ್ನು ಅನುಸರಿಸುತ್ತವೆ ಮುಂದೆ ಅದನ್ನೇ ಪಾಲಿಸುತ್ತಾರೆ ಹಾಗಾಗಿ ನಾವು ಉತ್ತಮ ಮಾದರಿಯಾಗಬೇಕು ಒಳ್ಳೆಯ ಜೀವನ ಮೌಲ್ಯಗಳನ್ನು ಹೊಂದಿ ಮಕ್ಕಳಿಗೆ ಪ್ರೇರಣೆಯಾಗಬೇಕು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸನ್ನ ಎನ್ ರಾವ್ ಮಾತನಾಡಿ,ಯುವಕರು ದೇಶದ ಸಂಪತ್ತು ಅದನ್ನು ಸರಿಯಾಗಿ ಬೆಳೆಸಿ ಬಳಸಬೇಕಿದೆ. ಯುವಕರು ಸಿಕ್ಕುವ ಒಳ್ಳೆಯ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ವ್ಯಕ್ತಿತ್ವ ವಿಕಾಸಗೊಳಿಸಿಕೊಳ್ಳಬೇಕು. ನಾವು ಹೃದಯದಿಂದ ಸಂತೋಷ ಕಾಣುವ ಮನಸ್ಥಿತಿ ಕಂಡುಕೊಳ್ಳಬೇಕು ಖುಷಿ ಕಂಡುಕೊಳ್ಳುವ ಬರದಲ್ಲಿ ನೈಜ ಸಂತೋಷಗಳಿಂದ ವಿಮುಖರಾಗಬಾರದು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ ಹರೀಶ್ ಅವರು ಪ್ರಾಸ್ತಾವಿಕ ನುಡಿಗಳ್ಳನಾಡಿದರು. ಈವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಆಯುರ್ವೇದ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ಶೈಲಜ, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ರಾಷ್ಟ್ರ ಪ್ರಶಸ್ತಿ ವಿಜೇತ ಬಿ.ಟಿ ಮಾನವ, ರಾಜ್ಯ ಯುವ ಪ್ರಶಸ್ತಿ ವಿಜೇತ ಚನ್ನಂಗಿ ಹಳ್ಳಿ ಶ್ರೀಕಾಂತ್‌ಇತರರು ಇದ್ದರು.