ಮೈಸೂರು: ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ವಿಶ್ವದ ಪ್ರಮುಖ ದೇಶಗಳನ್ನು ಒಳಗೊಂಡಿರುವ ಜಿ-20 ಸಮೂಹದ ಸಾರಥ್ಯವನ್ನು ಇದೀಗ ಭಾರತ ವಹಿಸಿದ್ದು, ಭವಿಷ್ಯದ ಉತ್ತಮ ದಾರಿಯನ್ನು ಕಂಡುಕೊಳ್ಳಲು ಎಲ್ಲ ರಾಷ್ಟ್ರಗಳು ಭಾರತದತ್ತ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದೆ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಹೇಳಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠ ವತಿಯಿಂದ ನಗರದ ಜೆಎಸ್‌ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವದ ದತ್ತಿ ಉಪನ್ಯಾಸದಲ್ಲಿ ‘ಜಿ-20 ನಾಯಕತ್ವ: ಭಾರತದ ಅವಕಾಶಗಳು’ ಎಂಬ ವಿಷಯದ ಕುರಿತು ಮಾತನಾಡಿ, ಜಿ-20 ಸಮೂಹದ ನಾಯಕತ್ವ ವಹಿಸಿರುವ ಭಾರತ ವಿವಿಧ ದೇಶಗಳಿಗೆ ದಾರಿ ತೋರುವ ಜತೆಗೆ ಜಾಗತಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ದೇಶಕ್ಕೆ ಜಿ-20 ನಾಯಕತ್ವ ದೊರೆಯಲು ನಾವು ನಂಬಿರುವ ‘ವಸುದೈವ ಕುಟುಂಬಕಂ’ ಮತ್ತು ‘ಸರ್ವೋಜನೋ ಸುಖಿನೋಭವಂತು’ ತತ್ವಗಳೇ ಕಾರಣ. ಭಾರತ ತನ್ನ ಅಭಿವೃದ್ಧಿಯ ಜತೆಗೆ ಎಲ್ಲ ರಾಷ್ಟ್ರಗಳ ಹಿತವನ್ನು ಬಯಸುತ್ತದೆ. ಆದರೆ, ಕೆಲವು ರಾಷ್ಟ್ರಗಳು ತಮ್ಮ ಸ್ವಾರ್ಥ ಸಾಧನೆಯ ಕಡೆಗೆ ಮಾತ್ರ ಗಮನ ಕೇಂದ್ರೀಕರಿಸುತ್ತದೆ. ಚೀನಾ ಆರ್ಥಿಕವಾಗಿ ಪ್ರಬಲವಾದ ನಂತರ ನೆರೆಯ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನಕ್ಕೆ ಸಾಲಗಳನ್ನು ನೀಡಿ ಆ ನಂತರ ಆ ದೇಶದ ಭೂಪ್ರದೇಶಗಳನ್ನು ಕಬಳಿಸಲು ಚೀನಾ ಪ್ರಯತ್ನಿಸಿತು. ಹೀಗಾಗಿ ಚೀನಾವನ್ನು ಎಲ್ಲ ರಾಷ್ಟ್ರಗಳು ಅನುಮಾನದ ದೃಷ್ಟಿಯಿಂದ ನೋಡುತ್ತಿವೆ ಎಂದು ಹೇಳಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.