ಶ್ರೇಯಸ್ ಪಟೇಲ್ 
ಜಿಲ್ಲೆ

ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ಮುಂದುವರಿಯಬೇಕಿತ್ತು: ಸಂಸದ ಶ್ರೇಯಸ್ ಪಟೇಲ್

ಹಾಸನ:  ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ಮತ್ತು ಕದನ ವಿರಾಮ ವಿಚಾರದಲ್ಲಿ ಅಮೆರಿಕ ಮಧ್ಯಸ್ಥಿಕೆ ವಹಿಸುವ ಬದಲು ಪ್ರಧಾನಿ ನರೇಂದ್ರ ಮೋದಿ ಅವರೇ ಒಂದು ಒಳ್ಳೆಯ ನಿರ್ಧಾರ ಕೈಗೊಳ್ಳಬಹುದಿತ್ತು ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಪಹಲ್ಗಾಮ್ ನರಮೇಧದಲ್ಲಿ ಬಲಿಯಾದ ಅಮಾಯಕರು ಹಾಗೂ ಪಾಕಿಸ್ತಾನ ವಿರುದ್ಧದ ಸಂಘರ್ಷದಲ್ಲಿ ವೀರ ಮರಣ ಹೊಂದಿದ ಯೋಧರಿಗೆ ಹಮ್ಮಿಕೊಂಡಿದ್ದ ನಮನ ಮತ್ತು ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಡೀ ದೇಶದ ಜನ ಭಯೋತ್ಪಾದನೆ ವಿರುದ್ಧ ನಿಲ್ಲಬೇಕಿದೆ, ಅಂತೆಯೇ ನಾವೂ ಕೂಡ ರಾಹುಲ್‌ಗಾಂಧಿ ಹಾಗೂ ನಮ್ಮ ನಾಯಕರ ಸೂಚನೆ ಮೇರೆಗೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲ ನೀಡಿದ್ದೇವೆ ಎಂದರು.
ಆದರೆ ಇಂಡಿಯಾ-ಪಾಕ್ ಕದನ ವಿರಾಮ ವಿಚಾರದಲ್ಲಿ ಅಮೆರಿಕಾ ಮಧ್ಯಸ್ಥಿಕೆ ವಹಿಸುವ ಬದಲು ಮೋದಿಯವರೇ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬಹುದಿತ್ತು. ಈಗ ಕದನ ವಿರಾಮ ಆಗಿದೆ, ನಾವು ಭಯೋತ್ಪಾದನೆ ವಿರುದ್ಧ ಇರಬೇಕು. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಯುದ್ಧ ನಡೆದಿದ್ದರೆ ಭಾರತವೇ ಗೆಲ್ಲುತ್ತಿತ್ತು, ನೆರೆಯ ಶತ್ರು ರಾಷ್ಟ್ರಕ್ಕೆ ಒಂದು ಪಾಠ ಕಲಿಸಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಪಹಲ್ಗಾಮ್ ನರಮೇಧದಿಂದ ಅನೇಕ ತಾಯಂದಿರು, ಮಕ್ಕಳು ಕಣ್ಣೀರಿಟ್ಟಿದ್ದಾರೆ. ಅದನ್ನು ಯಾವತ್ತೂ ಮರೆಯಲು ಆಗಲ್ಲ. ಯುದ್ಧ ಮುಂದುವರೆಸಿದ್ದರೆ ಸ್ವಾಗತಿಸಬಹುದಿತ್ತು. ದೇಶದ ಆರ್ಥಿಕತೆಗಾಗಿ ಕದನ ವಿರಾಮ ಘೋಷಿಸಲಾಗಿದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಭಯೋತ್ಪಾದನೆ ನಿಗ್ರಹಕ್ಕೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಸಾಮೂಹಿಕವಾಗಿ ನಮ್ಮ ಬೆಂಬಲ ಇರುತ್ತದೆ. ರಾಹುಲ್‌ಗಾಂಧಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯುತ್ತಿದ್ದೇವೆ ಎಂದರು.
ಉಭಯ ದೇಶಗಳ ವಿಚಾರದಲ್ಲಿ ಅಮೆರಿಕಾ ಶಹಬ್ಬಾಸ್‌ಗಿರಿ ತೆಗೆದುಕೊಳ್ಳುವಂತಹದ್ದು ಏನಿತ್ತು, ಇದು ಪ್ರತಿಷ್ಠೆಯ ಪ್ರಶ್ನೆ, ಅಳಿವು-ಉಳಿವಿನ ಪ್ರಶ್ನೆ. ನಮ್ಮ ದೇಶಕ್ಕೆ ಆಗಿರಬಹುದು, ಪಾಕಿಸ್ತಾನಕ್ಕೆ ಆಗಿರಬಹುದು, ಅಮೆರಿಕಾ ಮಧ್ಯಸ್ಥಿಕೆ ವಹಿಸಿ ಅವರಿಗೆ ಹೆಸರು ಕೊಡುವ ಅಗತ್ಯವಿರಲಿಲ್ಲ.ಯುದ್ಧದಲ್ಲಿ ಎಷ್ಟೋ ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಅವರು ಕುಟುಂಬದವರನ್ನು ಕಳೆದುಕೊಂಡಿದ್ದಾರೆ. ಅಂತಹದ್ದರಲ್ಲಿ  ಇವರು ಏಕಾಏಕಿ ಯುದ್ಧವನ್ನು ನಿಲ್ಲಿಸಿ ಅಮೆರಿಕಾದವರ ಹೆಸರು ತೆಗೆದುಕೊಳ್ಳುವುದು ಅನವಶ್ಯಕ. ಅವರು ಹೆಸರು ತೆಗೆದುಕೊಳ್ಳಬಾರದು. ಪವರ್ ಶೇರಿಂಗ್ ವಿಚಾರ, ಅದರ ಬಗ್ಗೆ ರಾಷ್ಟ್ರೀಯ, ರಾಜ್ಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ.  ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ ಎಂದ ಅವರು, ನಮ್ಮ ಹೈಕಮಾಂಡ್ ಇದೆ, ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಮಾಧ್ಯಮಗಳ ಮುಂದೆ ಹೇಳಿಕೆ ನೀಡಬಾರದೆಂದು ನಮಗೆ ಹೈಕಮಾಂಡ್ ಕಟ್ಟಪ್ಪಣೆ ಮಾಡಿದ್ದಾರೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳಿದರು.