ಜಿಲ್ಲೆ

ಭಾರತ ಜೋಡೋ ಯಾತ್ರೆ ಹೆಸರಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಹೋರಾಟ: ಕುಮಾರ್ ಬಂಗಾರಪ್ಪ

ಸೊರಬ: ಪಕ್ಷದ ಬಲವರ್ಧನೆ ಹಾಗೂ ಸಂಘಟನೆಗೆ ಕಾರ್ಯಕರ್ತರ ಸಂಘಟನಾತ್ಮಕ ಚಟುವಟಿಕೆಗಳು ಕಾರಣವಾಗಿದ್ದು, ಅವರ ಪರಿಶ್ರಮದಿಂದ ಪಕ್ಷ ಸದೃಢವಾಗಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.

ಮಂಗಳವಾರ ಬಿಜೆಪಿ ಕಾರ್ಯಾಲಯದಲ್ಲಿ ಸೊರಬ ಪಟ್ಟಣದ ಬೂತ್ ಮಟ್ಟದ ಪೇಜ್ ಪ್ರಮುಖರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಕೇಡರ್ ಬೇಸ್ ಇಲ್ಲದೆ, ರಾಷ್ಟ್ರೀಯ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸಿತ್ತು. ಇಂದು ಅವರ ಬಳಿ ಜನರಿಲ್ಲ. ಸಂಘಟನಾತ್ಮಕವಾಗಿ ಕೆಲಸ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿ, ಜನರಿಂದ ದೂರವಾಗುವ ಸ್ಥಿತಿಗೆ ಬಂದು ತಲುಪಿದೆ. ಭಾರತ್ ಜೋಡೋ ಯಾತ್ರೆ ಹೆಸರಿನಲ್ಲಿ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದ ದೂರಿದರು.

ಬಿಜೆಪಿ ಆಡಳಿತಾತ್ಮಕವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯ ಸಂದರ್ಭದಲ್ಲಿ ಪಕ್ಷದ ಪೇಜ್ ಪ್ರಮುಖರು ಹಾಗೂ ಕಾರ್ಯಕರ್ತರ ಪರಿಶ್ರಮದಿಂದ ಅಧಿಕಾರ ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂದರು.