ಬಾಗಲಕೋಟೆ: ರಾಜ್ಯ ಸರ್ಕಾರದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆಯೇ ಹೃದಯಘಾತದಿಂದ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಅವರ ಸಾವನ್ನಪ್ಪಿರುವುದಕ್ಕೆ ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಕಂಬನಿ ಮಿಡಿದಿದ್ದಾರೆ.
ನುಪ್ರಕಾಶ್ ಅವರು ತಮಗೆ ಮಾರ್ಗದರ್ಶಕರು ಆಗಿದ್ದವರು. ಅವರ ಅನಿರೀಕ್ಷಿತ ಸಾವು ಸಂಘ ಪರಿವಾರ, ಬಿಜೆಪಿ ಕಾರ್ಯಕರ್ತರು ಹಾಗೂ ವೈಯಕ್ತಿಕವಾಗಿ ತಮಗೆ ತುಂಬ ಆಘಾತವನ್ನು ತಂದಿದೆ. ಸಂಘಟನೆ ವಿಚಾರವಾಗಿ ಅವರು ನಮಗೆಲ್ಲ ಕಾಲ ಕಾಲಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು.
ಭಾನುಪ್ರಕಾಶ್ ಅವರು ತಮ್ಮ ಇಡೀ ಜೀವನವನ್ನು ಸಂಘ ಮತ್ತು ಸಂಘಟನೆಗೆ ಸಮರ್ಪಿಸಿಕೊಂಡಿದ್ದರು. ಅತ್ಯಂತ ಸರಳ, ಸಜ್ಜಿನಿಕೆ, ಪರಿಶುಭ್ರ ವ್ಯಕ್ತಿತ್ವ ಹೊಂದಿದ್ದ ಅವರು, ತಮ್ಮ ಜೀವನ ಶೈಲಿಯನ್ನು ತ್ಯಾಗದ ಪ್ರತಿರೂಪವಾಗಿಸಿಕೊಂಡಿದ್ದವರು. ವಿಧಾನ ಪರಿಷತ್ ಸದಸ್ಯರಾಗಿ ಪ್ರಜಾಪ್ರಭುತ್ವದ ಪಾವಿತ್ರ‍್ಯತೆಯನ್ನು ಪಾರದರ್ಶಕವಾಗಿ ಎತ್ತಿ ಹಿಡಿಯಲು ಪ್ರಮಾಣಿಕವಾಗಿ ಶ್ರಮಿಸುತ್ತ ಬಂದಿದ್ದರು. ಹೋರಾಟದ ವೇಳೆಯೇ ಸಾವನ್ನಪ್ಪುವ ಮೂಲಕ ಸಂಘ ಪರಿವಾರದ ತ್ಯಾಗ ಬಲಿದಾನಗೈದವರ ಸಾಲಿಗೆ ಸೇರಿದ್ದಾರೆ. ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಭಗವಂತನಲ್ಲಿ ಪಾರ್ಥಿಸುವುದಾಗಿ ಮಾಜಿ ಶಾಸಕ ಚರಂತಿಮಠ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.