ಹೊಸಕೋಟೆ: ಈ ಹಿಂದೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಆ ಭಾಗ್ಯ ಈ ಭಾಗ್ಯ ಎಂದು ಜನರನ್ನು ಮರುಳು ಮಾಡಿ ಕಡೆಗೆ ಜನತೆ ಭಿಕ್ಷೆ ಬೇಡುವ ಹಂತಕ್ಕೆ ಯೋಜನೆ ರೂಪಿಸಿತ್ತು ಎಂದು ವೈದ್ಯಕೀಯ ಹಾಗೂ ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದರು.
ಅನುಗೊಂಡನಹಳ್ಳಿ ಹೋಬಳಿ ಕಲ್ಲುಕುಂಟೆ ಅಗ್ರಹಾರದಲ್ಲಿ ಶನಿವಾರ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹಿಂದಿನ ಸರ್ಕಾರ ರೂಪಿಸಿದ ಯಾವೊಂದೂ ಯೋಜನೆಗಳು ಬಡವರ ಪರವಾಗಿರಲಿಲ್ಲ, ಶಾಶ್ವತ ಯೋಜನೆ ರೂಪಿಸುವಲ್ಲಿ ಅದು ವಿಲವಾಗಿತ್ತು. ಆದರೆ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಜನರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಸಮರ್ಥಿಸಿಕೊಂಡರು.
ಹೊಸಕೋಟೆಗೆ ತಾಯಿ-ಮಗು ಆಸ್ಪತ್ರೆ: ಹೊಸಕೋಟೆ ತಾಲೂಕಿಗೆ ತಾಯಿ ಮತ್ತು ಮಗು ಆಸ್ಪತ್ರೆ ನಿರ್ಮಾಣ ಶೀಘ್ರ ಕಾರ್ಯರೂಪಕ್ಕೆ ಬರಲಿದೆ ಎಂದ ಸುಧಾಕರ್, ಹೊಸಕೋಟೆ ಬೆಂಗಳೂರಿಗೆ ಹೊಂದಿಕೊಂಡಿದ್ದು, ರೈತರು ಕೃಷಿ ಭೂಮಿ ಉಳಿಸಿಕೊಳ್ಳಬೇಕು, ಭೂಮಿ ಇದ್ದರೆ ಉದ್ಯೋಗದ ಜತೆಗೆ ಆರ್ಥಿಕ ಭದ್ರತೆಯೂ ಇರುತ್ತದೆ ಎಂದು ಕಿವಿಮಾತು ಹೇಳಿದರು.
ಸೌಲಭ್ಯ ವಿತರಣೆ: ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ವೃದ್ಧರಿಗೆ ಪಿಂಚಣಿ ಮಂಜೂರಾತಿ ಆದೇಶ ಪತ್ರ, ನರೇಗಾ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಿಸಲಾಯಿತು.
ಭೂ ಕಬಳಿಕೆಗೆ ಕಡಿವಾಣ ಹಾಕಬೇಕು: ಗ್ರಾಪಂ ವ್ಯಾಪ್ತಿಯಲ್ಲಿರುವ ಗೋಮಾಳ ಜಮೀನುಗಳನ್ನು ಕೇವಲ ಸಾರ್ವಜನಿಕ ಬಳಕೆಗೆ ಹಾಗೂ ಬಡವರ ಮನೆ ನಿರ್ಮಾಣಕ್ಕೆ ಮೀಸಲಿಡಬೇಕು. ಕೆಲವು ಜನಪ್ರತಿನಿಧಿಗಳು, ಪ್ರಭಾವಿಗಳು ಸುಳ್ಳು ದಾಖಲೆ ಸೃಷ್ಟಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿ ಕಡೆಗೆ ಜಮೀನು ಕಬಳಿಸುವ ಕೆಲಸಕ್ಕೆ ಜಿಲ್ಲಾಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಸೂಚಿಸಿದರು.
ಹೊಸಕೋಟೆ ತಾಲೂಕಿನಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಪ್ರಭಾವಿಗಳು ಕಬಳಿಸಿದ್ದಾರೆ. ಇದರ ಸಂಪೂರ್ಣ ದಾಖಲೆ ನನ್ನ ಬಳಿ ಇದೆ. ಮುಂದಿನ ದಿನಗಳಲ್ಲಿ ಇದನ್ನು ಜನರ ಮುಂದೆ ತಂದು ಭೂಮಿ ವಾಪಸ್ ತರುವ ಪ್ರಯತ್ನ ಮಾಡುತ್ತೇನೆ ಎಂದು ಪುನರುಚ್ಚರಿಸಿದರು.
ನಾನು ಶಾಸಕನಾಗಿ ಬರುವ ಮುನ್ನ ಹೊಸಕೋಟೆಯಲ್ಲಿ ಬಡವರ ಭೂಮಿ, ಸರ್ಕಾರದ ಜಾಗಗಳನ್ನು ದಬ್ಬಾಳಿಕೆ ಮಾಡಿ, ದೌರ್ಜನ್ಯ ಎಸಗಿ ಕಬಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇವೆಲ್ಲಕ್ಕೂ ಅವರು ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.
ಸರ್ಕಾರದ ವಿನೂತನ ಯೋಜನೆ: ಸರ್ಕಾರದ ಹಲವು ಇಲಾಖೆಗಳಿಂದ ಒಂದೇ ವೇದಿಕೆಯಲ್ಲಿ ಸೌಲಭ್ಯ ವಿತರಣೆ ಹಮ್ಮಿಕೊಳ್ಳಲಾಗಿದೆ, ಇದು ಸರ್ಕಾರದ ವಿನೂತನ ಕಾರ್ಯಕ್ರಮವಾಗಿದ್ದು, ಸರ್ಕಾರದ ಯೋಜನೆ ಪಡೆಯಲು ಲಾನುಭವಿಗಳು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿದಂತಾಗಿದೆ ಎಂದು ಎಂಟಿಬಿ ಹೇಳಿದರು.
ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಚೇರಿಯಲ್ಲಿ ಕುಳಿತು ಕೆಲಸ ಮಾಡದೆ ಜನರ ಮಧ್ಯೆ ಹೋಗಿ ವಾಸ್ತವ ಅರಿತು ಕೆಲಸ ಮಾಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿ ಗ್ರಾಪಂ ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಬೇಕು, ಇದರಿಂದ ಸರ್ಕಾರದ ಯೋಜನೆಗಳು ಸುಲಭವಾಗಿ ತಲುಪುತ್ತದೆ ಎಂದರು.
ಸೀಮಂತ: ಎಂಟಿಬಿ ನಾಗರಾಜ್ ನೇತೃತ್ವದಲ್ಲಿ ಮಕ್ಕಳ ಮತ್ತು ಮಹಿಳಾ ಕಲ್ಯಾಣಾಭಿವೃದ್ಧಿ ಇಲಾಖೆಯಿಂದ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಇದೇ ವೇಳೆ ಸಾರ್ವಜನಿಕರ ಕುಂದುಕೊರತೆಗಳ ಅರ್ಜಿ ಪರಿಶೀಲಿಸಿದ ಸಚಿವರು ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಇಲಾಖೆಗಳ ಯೋಜನೆ ಕುರಿತು ಮಾಹಿತಿ ನೀಡುವ ಮಳಿಗೆಗಳನ್ನು ಉದ್ಘಾಟಿಸಲಾಯಿತು. ಸುಧಾಕರ್ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬಳಿಕ ಕಬಡ್ಡಿ ಹಾಗೂ ವಾಲಿಬಾಲ್ ಕ್ರೀಡೆಗಳಿಗೆ ಚಾಲನೆ ನೀಡಿದರು.
ಮನೆಬಾಗಿಲಿಗೆ ಸರ್ಕಾರಿ ಸವಲತ್ತು: ಸರ್ಕಾರದ ಸವಲತ್ತುಗಳನ್ನು ಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಸರ್ಕಾರದ ಈ ಯೋಜನೆ ಯಶಸ್ವಿಗೆ ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.
ಕಲ್ಲುಕುಂಟೆ ಅಗ್ರಹಾರದಲ್ಲಿ ಕಾಲ್ನಡಿಗೆ ಮೂಲಕ ಜನರ ಮನೆಬಾಗಿಲಿಗೆ ತೆರಳಿ ಕುಂದುಕೊರತೆಗಳನ್ನು ಆಲಿಸಿ ಮಾತನಾಡಿದರು. ಸರ್ಕಾರದ ಯೋಜನೆಗಳು ಅರ್ಹ ಲಾನುಭವಿಗಳಿಗೆ ತಲುಪಿದಾಗ ಮಾತ್ರ ಯಾವುದೇ ಯೋಜನೆ ಯಶಸ್ವಿಯಾಗಲು ಸಾಧ್ಯ, ಸಾರ್ವಜನಿಕ ಕೆಲಸಗಳಿಗೆ ವಿನಾ ಕಾರಣ ಜನ ಕಚೇರಿಗೆ ಅಲೆಯುವಂತೆ ಮಾಡಬಾರದು, ಯಾವುದೇ ಕೆಲಸವಾದರೂ ಅಧಿಕಾರಿಗಳು ಮೀನಮೇಷ ಏಣಿಸದೆ ತಕ್ಷಣ ಸ್ಪಂದಿಸಬೇಕು ಎಂದು ತಾಕೀತು ಮಾಡಿದರು. ಕಳೆದ ಬಾರಿ ಹೊಸಕೋಟೆಯಲ್ಲಿ ಕಾರ್ಯಕ್ರಮ ನಿಯೋಜಿಸಲಾಗಿತ್ತು. ಆದರೆ ಕರೊನಾ ಕಾರಣದಿಂದ ಮುಂದೂಡಲಾಗಿತ್ತು ಈಗಾಗಲೇ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.