ಹೊಳಲ್ಕೆರೆ: ಭಾಷೆ ಸಂಸ್ಕೃತಿಯ ಪ್ರತಿಬಿಂಬ ಮತ್ತು ನಮ್ಮ ಬದುಕಿನ ಅಸ್ಮಿತೆಯ ಸಂಕೇತವಾಗಿದೆ ಎಂದು ಕವಿ ಚಂದ್ರಶೇಖರ ತಾಳ್ಯ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಕನ್ನಡ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಮದರ್ ತೆರೆಸಾ ಜನ್ಮದಿನಾಚರಣೆ ಹಾಗೂ ಮಕ್ಕಳ ಶ್ರಾವಣ ಕಾವ್ಯಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವುದರಿಂದ ಉತ್ತಮ ಸಂಸ್ಕೃತಿ ಸಂಸ್ಕಾರಗಳ ರೂಢಿಸಬಹುದು. ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಅಧ್ಯಯನದಿಂದ ತಮ್ಮ ಕಲ್ಪನೆ ವಿಸ್ತಾರವಾಗುವುದು ಹಾಗೂ ವಿವಿಧ ಸಾಹಿತ್ಯ ಪ್ರಕಾರಗಳ ಬರವಣಿಗೆಯಲ್ಲಿ ಪರಿಣಿತಿ ಗಳಿಸಬಹುದು ಎಂದು ಹೇಳಿದರು.
ಮಾತೃಭಾಷೆಯಲ್ಲಿ ಶಿಕ್ಷಣ ಕಲಿತವರು ಅಪಾರ ಜ್ಞಾನ ಸಂಪಾದಿಸಿ, ಜೀವನದಲ್ಲಿ ಸಾಧನೆ ಮಾಡುತ್ತಾರೆ. ಆದ್ದರಿಂದ ನಾವೆಲ್ಲರೂ ಕನ್ನಡ ಭಾಷೆ ಕಲಿಕೆಗೆ ಹೆಚ್ಚು ಆದ್ಯತೆ ನೀಡಬೇಕಿದೆ ಎಂದರು.
ಮಾತೃಭಾಷೆಯಲ್ಲಿ ಮಾತ್ರ ಕನಸು ಕಾಣಲು ಸಾಧ್ಯ. ಹಾಗೆಯೇ ಸಾಧನೆ ಮಾಡಲು ಸುಲಭ ಎಂಬುದನ್ನು ಅರಿತುಕೊಳ್ಳಬೇಕು. ಶಿಕ್ಷಣ ತಜ್ಞರು ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ರೀತಿ ಶಿಕ್ಷಣ ನೀತಿ ರೂಪಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಬೇಕು. ಆಗ ಮಾತ್ರ ಅವರು ಜೀವನದಲ್ಲಿ ಪರಿಪೂರ್ಣರಾಗಲು ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪಾಲಕರ ಹೊಣೆಗಾರಿಕೆ ಹೆಚ್ಚು ಎಂದರು.