ಯಳಂದೂರು: ಉತ್ತಮ ಶಿಕ್ಷಕನಾಗಬೇಕಾದರೆ ಆತ ಉತ್ತಮ ಕಲಿಕಾರ್ಥಿಯಾಗಿರಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಮಂಜೇಗೌಡ ಅಭಿಪ್ರಾಯಪಟ್ಟರು.
ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲೂಕಿನ ವಡಗೆರೆ ಗ್ರಾಮದ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಕ ವಿದ್ಯಾರ್ಥಿಗಳ ಜೀವನಕ್ಕೆ ಹೊಸ ಆಯಾಮ ನೀಡುವ ವ್ಯಕ್ತಿಯಾಗಿರುತ್ತಾನೆ. ಉತ್ತಮ ಪ್ರಜೆಗಳಾಗಿ ರೂಪಿಸಬಲ್ಲ ಶಿಲ್ಪಿಯಾಗಿರುತ್ತಾನೆ. ಭವ್ಯ ಭಾರತ ನಿರ್ಮಾಣಕ್ಕೆ ಉತ್ತಮ ಶಿಕ್ಷಣ ಬೇಕಿದ್ದು, ಅದನ್ನು ತುಂಬುವ ಕೆಲಸವನ್ನು ಶಿಕ್ಷಕರು ಜಾಗರೂಕರಾಗಿ ಮಾಡಬೇಕು. ದೇಶದ ಒಳಿತಿನ ಬಗ್ಗೆ ಚಿಂತಿಸುವ ಗುಣವನ್ನು ಮಕ್ಕಳಲ್ಲಿ ತುಂಬಬೇಕು ಎಂದು ಸಲಹೆ ನೀಡಿದರು.
ಶಾಸಕ ಎನ್. ಮಹೇಶ್ ಮಾತನಾಡಿ, ಶಿಕ್ಷಕರ ಭವನ ನಿರ್ಮಾಣ ಮಾಡಬೇಕು ಎಂಬುದು ಬಹುವುದು ದಿನದ ಬೇಡಿಕೆ. ಇದಕ್ಕಾಗಿ ಸ್ಥಳದ ಅವಶ್ಯಕತೆ ಇದ್ದು, ಪಟ್ಟಣದ ಆಶ್ರಯ ಬಡಾವಣೆಯಲ್ಲಿರುವ ಸ್ಥಳವನ್ನು ನೀಡಲು ಇದರ ಅಧ್ಯಕ್ಷನಾಗಿ ನಾನು ಚರ್ಚಿಸಿದ್ದೇನೆ. ಪಟ್ಟಣ ಪಂಚಾಯಿತಿಯ ನಾಲ್ಕು ಸದಸ್ಯರು ಹಾಗೂ ಮೂರು ನಾಮನಿರ್ದೇಶಿತ ಸದಸ್ಯರು ಇದಕ್ಕೆ ಒಪ್ಪಿಗೆ ನೀಡಿ ಸಹಿ ಮಾಡಿದ್ದಾರೆ. ಮತ್ತೊಬ್ಬ ಸದಸ್ಯರ ಸಹಿಯನ್ನು ಮಾಡಿಸಿಕೊಂಡಲ್ಲಿ ನಿಮಗೆ ಜಾಗವನ್ನು ನಾನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಮುಖ್ಯ ಭಾಷಣಕಾರರಾಗಿ ಸಾಹಿತಿ ಮಹಾದೇವ ಶಂಕನಪುರ ಮಾತನಾಡಿದರು.
ಗೌಡಹಳ್ಳಿ ಗ್ರಾಪಂ ಅಧ್ಯಕ್ಷೆ ಶಿವನಂಜಮ್ಮ, ಡಯಟ್ ಪ್ರಾಂಶುಪಾಲ ಎಚ್.ಕೆ.ಪಾಂಡು, ಬಿಇಒ ಕೆ. ಕಾಂತರಾಜು, ಬಿಆರ್‌ಸಿ ಬಿ.ಎನ್. ನಾಗೇಂದ್ರ, ದೈಹಿಕ ಪರಿವೀಕ್ಷಕ ಎಸ್.ಲಿಂಗರಾಜು ಶಿಕ್ಷಣ ಸಂಯೋಜಕ ಶಿವಲಂಕಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೀರಭದ್ರಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಎಂ.ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಣ್ಣ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾದೇವ ಇತರರು ಇದ್ದರು.