ಹಾಸನ: ಸದ್ಯ ರಾಜ್ಯದ ಸುದ್ದಿ ಮಾಧ್ಯಮಗಳಲ್ಲಿ ಹೆಚ್ಚು ಚರ್ಚಿತವಾಗುತ್ತಿರುವ ವಿಷಯ ‘ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಭವಾನಿಗೆ ಕೊಡುತ್ತಾರಾ, ಇಲ್ಲ ರೇವಣ್ಣನೇ ನಿಂತುಕೊಳ್ಳುತ್ತಾರಾ ಅಥವಾ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದಂತೆ ಸಾಮಾನ್ಯ ಕಾರ್ಯಕರ್ತ ಎಚ್.ಪಿ. ಸ್ವರೂಪ್ ಅವರನ್ನು ಕಣಕ್ಕಿಳಿಸುತ್ತಾರಾ’ ಎಂಬುದು.
ಹಾಸನ ಜಿಲ್ಲೆಯಲ್ಲಂತೂ ಎಲ್ಲ ಹೋಟೆಲ್‌ಗಳ ಟೇಬಲ್‌ಗಳಲ್ಲಿ, ಅಂಗಡಿಗಳ ಮುಂದೆ ರಾಜಕೀಯಾಸಕ್ತ ಜನ ತಮ್ಮದೇ ಆದ ವಿಶ್ಲೇಷಣೆ ಮಾಡಿಕೊಂಡು ಇದೇ ವಿಷಯದ ಚರ್ಚೆಯಲ್ಲಿ ತೊಡಗಿದ್ದಾರೆ. ದೃಶ್ಯ ಮಾಧ್ಯಮಗಳಂತೂ ಎಚ್.ಡಿ. ರೇವಣ್ಣ ಕುಟುಂಬ ದೇವಸ್ಥಾನಕ್ಕೆ ಹೋದರೂ ಸುದ್ದಿ, ಜನರನ್ನು ಭೇಟಿ ಮಾಡಿದರೂ ಸುದ್ದಿ ಎಂಬಂತೆ ಬೆನ್ನು ಬಿದ್ದಿವೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೂಚನೆಯಂತೆ ದಿವಂಗತ ಶಾಸಕ ಎಚ್.ಎಸ್. ಪ್ರಕಾಶ್ ಪುತ್ರ, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಹಾಸನ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಸ್ವರೂಪ್ ಪರ ವಾತಾವರಣ ಹದಗೊಂಡರೆ ತಾವು ಕಣಕ್ಕಿಳಿಬೇಕೆಂಬ ಆಕಾಂಕ್ಷೆ ಕೈಗೂಡುವುದಿಲ್ಲ ಎಂಬುದನ್ನು ಅರಿತ ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಅವರು ತಮ್ಮ ಪತಿ ಶಾಸಕ ಎಚ್.ಡಿ. ರೇವಣ್ಣ ಮತ್ತು ಪುತ್ರ ಸಂಸದ ಪ್ರಜ್ವಲ್ ಜೊತೆಗೂಡಿ ದಿಢೀರ್ ಕ್ಷೇತ್ರ ಸಂಚಾರ ನಡೆಸಿದ್ದಾರೆ. ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಸ್ವರೂಪ್ ಅವರನ್ನು ದೂರ ಇಟ್ಟು ಗುರುವಾರದಿಂದ ಶನಿವಾರದವರೆಗೆ ಮೂರು ದಿನಗಳ ಕಾಲ ಹಾಸನ ಕ್ಷೇತ್ರದ ಎಲ್ಲ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿರುವ ರೇವಣ್ಣ ಕುಟುಂಬ, ಕ್ಷೇತ್ರದಲ್ಲಿ ಪಕ್ಷದ ಉಳಿವಿಗಾಗಿ ಮತ್ತು ಕಾರ್ಯಕರ್ತರನ್ನು ರಕ್ಷಿಸಲು ಬಂದಿರುವುದಾಗಿ ಹೇಳುತ್ತಾ ಪರೋಕ್ಷವಾಗಿ ತಮ್ಮ ಕುಟುಂಬದವರೇ ಅಭ್ಯರ್ಥಿ ಎಂಬ ಭಾವನೆ ಬಿತ್ತಿ ಬಂದಿದ್ದಾರೆ.
ಎಚ್ಚೆತ್ತ ಎಚ್‌ಡಿಕೆ:
ಈ ಬಾರಿಯ ಚುನಾವಣೆಯಲ್ಲಿ ಭವಾನಿ ಅವರ ಸ್ಪರ್ಧೆಯ ಅಗತ್ಯ ಬಿದ್ದಿಲ್ಲ ಎಂಬುದಾಗಿ ಹೇಳುತ್ತಲೇ ಬಂದಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಹಾಸನದಲ್ಲಿ ನಡೆದ ಈ ದಿಢೀರ್ ಬೆಳವಣಿಗೆಯಿಂದ ಕಸಿವಿಸಿ ಉಂಟಾಗಿದೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವಂತೆ ರೇವಣ್ಣ ಕುಟುಂಬಕ್ಕೆ ತಾವೇ ಸೂಚನೆ ನೀಡಿರುವುದಾಗಿ ಮಾಧ್ಯಮಗಳ ಎದುರು ಸಮಜಾಯಿಷಿ ನೀಡಿದರೂ ಎಚ್‌ಡಿಕೆ ಆಂತರಿಕವಾಗಿ ತೀವ್ರ ವಿಚಲಿತರಾಗಿರುವುದು ಸುಳ್ಳಲ್ಲ.
ಈ ಸಮಸ್ಯೆಯನ್ನು ಹೀಗೇ ಬಿಟ್ಟರೆ ಮುಂದೆ ರಾಜ್ಯದಲ್ಲಿ ಪಕ್ಷದ ಬೆಳವಣಿಗೆಗೆ ಧಕ್ಕೆ ಆಗುತ್ತದೆ ಎಂಬುದಾಗಿ ಎಚ್ಚೆತ್ತ ಎಚ್.ಡಿ. ಕುಮಾರಸ್ವಾಮಿ ಹಾಸನ ಕ್ಷೇತ್ರದ ಗೊಂದಲಗಳಿಗೆ ತೆರೆ ಎಳೆಯಲು ಬೆಂಗಳೂರಿನ ಜೆಡಿಎಸ್ ಕಚೇರಿ ಜೆ.ಪಿ. ಭವನದಲ್ಲಿ ಫೆ.26 ಭಾನುವಾರ ಸಂಜೆ 4 ಗಂಟೆಗೆ ಹಾಸನ ಕ್ಷೇತ್ರದ ಪ್ರಮುಖ ಜೆಡಿಎಸ್ ಕಾರ್ಯಕರ್ತರ ಸಭೆ ಕರೆದಿದ್ದಾರೆ. ಈ ಸಂಬಂಧ ಹಾಸನ ಕ್ಷೇತ್ರದ ಜೆಡಿಎಸ್‌ನ ನಗರಸಭೆ ಸದಸ್ಯರು, ಮಾಜಿ ಸದಸ್ಯರು, ಜಿಪಂ, ತಾಪಂ ಮಾಜಿ ಸದಸ್ಯರು, ಗ್ರಾಪಂ ಅಧ್ಯಕ್ಷರು ಮತ್ತಿತರ 300 ಪ್ರಮುಖರಿಗೆ ಜೆ.ಪಿ. ಭವನದಿಂದಲೇ ನೇರ ದೂರವಾಣಿ ಕರೆ ಮಾಡಿ ಆಹ್ವಾನ ನೀಡಲಾಗಿದೆ.
ಭಾನುವಾರದ ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಎಚ್.ಪಿ. ಸ್ವರೂಪ್ ಮತ್ತು ಭವಾನಿ ಇಬ್ಬರನ್ನೂ ಕೂರಿಸಿಕೊಂಡು ಕಾರ್ಯಕರ್ತರ ಅಭಿಪ್ರಾಯ ಕೇಳಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಶನಿವಾರ ಹಾಸನದ ಸಂಸದರ ನಿವಾಸಕ್ಕೆ ಪಕ್ಷದ ಪ್ರಮುಖ ಕಾರ್ಯಕರ್ತರನ್ನು ಕರೆಸಿಕೊಂಡು ತಮ್ಮ ತಾಯಿ ಪರ ಅಭಿಪ್ರಾಯ ವ್ಯಕ್ತಪಡಿಸುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಕಗ್ಗಂಟಿಗೆ ಕಾರಣವೇನು?
ಈ ಬಾರಿ ಚುನಾವಣೆಯಲ್ಲಿ ಕಷ್ಟಪಟ್ಟು ಕನಿಷ್ಠ 50 ಸ್ಥಾನಗಳನ್ನಾದರೂ ಗಳಿಸಿ ಮುಂದಿನ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ರಾಜ್ಯಾದ್ಯಂತ ಜೆಡಿಎಸ್ ಪಂಚರತ್ನ ಯಾತ್ರೆ ನಡೆಸುತ್ತಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಭವಾನಿ ಎಂಬ ಬಂಡೆಗಲ್ಲು ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ. ಮೊದಲೇ ಕುಟುಂಬ ರಾಜಕಾರಣದ ಆರೋಪ ಹೊತ್ತಿರುವ ಜೆಡಿಎಸ್ ಈ ಬಾರಿಯೂ ಗೌಡರ ಕುಟುಂಬದ ಮತ್ತೊಬ್ಬ ಸೊಸೆಗೆ ಟಿಕೆಟ್ ನೀಡಿದರೆ ವಿರೋಧ ಪಕ್ಷಗಳ ಬಾಯಿಗೆ ಆಹಾರ ಆಗಬೇಕಾಗುತ್ತದೆ. ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆ ಆಗಿ ಚುನಾವಣೆಯಲ್ಲಿ ಜೆಡಿಎಸ್ ಸ್ಥಾನ ಗಳಿಕೆ ಕುಗ್ಗಬಹುದು ಎಂಬ ಆತಂಕ ಕುಮಾರಸ್ವಾಮಿಯನ್ನು ಕಾಡುತ್ತಿದೆ.
ಅಷ್ಟಲ್ಲದೆ, ಜೆಡಿಎಸ್ ಭದ್ರಕೋಟೆ ಆಗಿದ್ದ ಹಾಸನ ಜಿಲ್ಲೆಯಲ್ಲಿ ಈಗಾಗಲೇ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಪಕ್ಷದ ತೊರೆದು ಕಾಂಗ್ರೆಸ್ ಸೇರಲು ಸಜ್ಜಾಗಿದ್ದರೆ, ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಸನ ಕ್ಷೇತ್ರಕ್ಕೆ ಭವಾನಿ ಅವರನ್ನು ಕಣಕ್ಕಿಳಿಸಿದರೆ ಅದರ ದುಷ್ಪರಿಣಾಮ ಅಕ್ಕಪಕ್ಕದ ಎರಡು ಕ್ಷೇತ್ರಗಳ ಮೇಲೆ ಉಂಟಾಗಿ ಅವುಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಎಚ್‌ಡಿಕೆ ಭಯಕ್ಕೆ ಕಾರಣವಾಗಿದೆ.
ದಾಸ ಒಕ್ಕಲಿಗರೇ ನಿರ್ಣಾಯಕ:
ಒಕ್ಕಲಿಗ ಉಪ ಪಂಗಡವಾಗಿರುವ ದಾಸ ಒಕ್ಕಲಿಗ ಸಮುದಾಯದ ವ್ಯಕ್ತಿ ಶಾಸಕರಾಗಲು ಸಾಧ್ಯವಿರುವುದು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ. ಹಾಸನ ಕ್ಷೇತ್ರದಲ್ಲಿ ಇದುವರೆಗೆ ಶಾಸಕರಾಗಿರುವವರಲ್ಲಿ ಜೈನ ಸಮುದಾಯದ ಎಚ್.ಬಿ. ಜ್ವಾಲನಯ್ಯ ಮತ್ತು ಮುಳ್ಳು ಒಕ್ಕಲಿಗ ಪಂಗಡದ ಬಿ.ವಿ. ಕರೀಗೌಡ ಹೊರತುಪಡಿಸಿದರೆ ಉಳಿದವರೆಲ್ಲಾ ದಾಸ ಒಕ್ಕಲಿಗ ಸಮುದಾಯದವರೇ.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಮುಳ್ಳು ಒಕ್ಕಲಿಗರ ಸಂಖ್ಯೆಗಿಂತ ದಾಸ ಒಕ್ಕಲಿಗರ ಸಂಖ್ಯೆ ಕನಿಷ್ಠ 25 ಸಾವಿರದಷ್ಟು ಹೆಚ್ಚಿದೆ. ಹೀಗಾಗಿ ಪ್ರತಿ ಚುನಾವಣೆಯ ಫಲಿತಾಂಶದಲ್ಲಿ ಈ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿದೆ. ಒಂದು ವೇಳೆ ಈ ಬಾರಿ ಮುಳ್ಳು ಒಕ್ಕಲಿಗ ಸಮುದಾಯಕ್ಕೆ ಸೇರಿದ ಭವಾನಿ ಅಥವಾ ರೇವಣ್ಣ ಅವರಿಗೆ ಹಾಸನ ಜೆಡಿಎಸ್ ಟಿಕೆಟ್ ನೀಡಿದರೆ ದಾಸ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಹಾಲಿ ಬಿಜೆಪಿ ಶಾಸಕ ಪ್ರೀತಮ್ ಗೌಡರಿಗೆ ಮತ್ತಷ್ಟು ಅನುಕೂಲ ಆಗಲಿದೆ ಎಂಬ ವಿಶ್ಲೇಷಣೆ ನಡೆಯುತ್ತಿದೆ.
ಅಲ್ಲದೆ, ಪಕ್ಕದ ಸಕಲೇಶಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರುವ ಆಲೂರು ತಾಲೂಕು ಮತ್ತು ಕಟ್ಟಾಯ ಹೋಬಳಿಯಲ್ಲಿ ಹಾಗು ಅಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ದಾಸ ಒಕ್ಕಲಿಗ ಸಮುದಾಯದ ಜನಸಂಖ್ಯೆ ಗಣನೀಯವಾಗಿದೆ. ಈ ಸಮುದಾಯ ಇದುವರೆಗೂ ಜೆಡಿಎಸ್ ಬೆಂಬಲಿಸಿಕೊಂಡು ಬಂದಿದೆ. ಒಂದು ವೇಳೆ ಹಾಸನ ಕ್ಷೇತ್ರದಲ್ಲಿ ದಾಸ ಒಕ್ಕಲಿಗ ಸಮುದಾಯಕ್ಕೆ ಜೆಡಿಎಸ್ ಟಿಕೆಟ್ ಕೈ ತಪ್ಪಿದರೆ, ಅದರ ದುಷ್ಪರಿಣಾಮವನ್ನು ಸಕಲೇಶಪುರ ಮತ್ತು ಅರಕಲಗೂಡು ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳೂ ಅನುಭವಿಸೇಕಾಗುತ್ತದೆ ಎಂಬ ಲೆಕ್ಕಾಚಾರ ಎಚ್‌ಡಿಕೆ ಕಂಗೆಡಿಸಿದೆ.
ಕುಟುಂಬ ವರ್ಸಸ್ ಪಕ್ಷ:
ಭವಾನಿ ಟಿಕೆಟ್ ವಿಷಯ ಕಗ್ಗಂಟಾಗಿರುವುದರಿಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಈಗ ಅತ್ಯಂತ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಪಕ್ಷ ಉಳಿಸಿಕೊಳ್ಳುವ ದೃಷ್ಟಿಯಿಂದ ಭವಾನಿಗೆ ಟಿಕೆಟ್ ನಿರಾಕರಣೆ ಮಾಡಿದರೆ ಕುಟುಂಬ ಒಡೆಯುತ್ತದೆ, ಕುಟುಂಬ ಉಳಿಸಿಕೊಳ್ಳಲು ನೋಡಿದರೆ ಪಕ್ಷದ ಸಂಘಟನೆಗೆ ಧಕ್ಕೆ ಆಗುತ್ತದೆ ಎಂಬ ಸನ್ನಿವೇಶ ನಿರ್ಮಾಣ ಆಗಿದೆ. ಈ ಬಿಕ್ಕಟ್ಟನ್ನು ಯಾವ ರೀತಿ ಬಗೆಹರಿಸುತ್ತಾರೆ ಎಂಬುದು ಜೆಡಿಎಸ್‌ನ ಮುಂದಿನ ರಾಜಕೀಯ ಏಳುಬಿಳು ನಿರ್ಧರಿಸಲಿದೆ.