ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಟಿ.ಜಿ.ಪ್ರೇಮಕುಮಾರ್, ಎಂ.ಎನ್.ವೆಂಕಟನಾಯಕ್ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಣಜೂರು ಮಂಜುನಾಥ್, ದಯಾನಂದ ಪ್ರಕಾಶ್, ಕೆ.ಗೋಪಾಲಕೃಷ್ಣ, ರಮ್ಯಾ, ಗೀತಾ, ರೇಖಾ ಇತರರು ಇದ್ದರು. 
ಜಿಲ್ಲೆ

ಭವಸಾಗರ ದಾಟಿಸುವ ಅಂಬಿಗನೆಂಬ ಹೆಗ್ಗಳಿಕೆಯ ಸಂತ

ಕುಶಾಲನಗರ: 12ನೇ ಶತಮಾನದ ವಚನಕಾರರಲ್ಲಿ ಶಿವಶರಣ ಅಂಬಿಗರ ಚೌಡಯ್ಯ ವಿಭಿನ್ನ ರೀತಿಯ ವಚನ ಸಾಹಿತ್ಯಕ್ಕೆ ಹೆಸರಾದ ಮಹಾನ್ ಸಂತ. ಇತರ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ನಿರ್ದೇಶಕ ಎಂ.ಎನ್.ವೆಂಕಟನಾಯಕ್ ಅಭಿಪ್ರಾಯಪಟ್ಟರು.

ಸಮೀಪದ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು ಕನ್ನಡ ಭಾಷಾ ಸಂಘ, ವಿದ್ಯಾರ್ಥಿ ಸಂಘ ಹಾಗೂ ಎಸ್‌ಡಿಎಂಸಿ ವತಿಯಿಂದ ಶನಿವಾರ ಆಯೋಜಿಸಿದ್ದ ಶಿವಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಣ್ಣನ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯಲ್ಲಿ ಸ್ಥಾನ ಪಡೆದು ಕಾಯಕವೇ ಕೈಲಾಸ ಎಂಬ ತತ್ತ್ವದಡಿ ನಡೆದು ಬಂದ ವ್ಯಕ್ತಿ ಹಾಗೂ ಆಚಾರ-ವಿಚಾರಗಳಲ್ಲಿ ದ್ವಂದ್ವ ಬದುಕನ್ನು ಸಾಗಿಸುವವರ ವಿರುದ್ಧ ಧ್ವನಿ ಎತ್ತಿದ ಮಹಾನ್ ಚೇತನ ಅಂಬಿಗರ ಚೌಡಯ್ಯ. ಭವಸಾಗರವನ್ನು ದಾಟಿಸುವ ಅಂಬಿಗ ಎಂಬ ಹೆಗ್ಗಳಿಕೆ ಪಡೆದ ಮಹಾನ್ ವ್ಯಕ್ತಿ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಬದುಕು ಹಸನಾಗಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಇಡೀ ಸಮಾಜದ ವ್ಯವಸ್ಥೆ ಹಾಗೂ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಕಂಕಣತೊಟ್ಟ ಅದೆಷ್ಟೋ ಮಹನೀಯರು ತಮ್ಮ ಜೀವನವನ್ನು ಧಾರೆ ಎರೆದಿದ್ದಾರೆ. ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಸರಳವಾದ ವಚನಗಳು ಹಾಗೂ ಆಡುಭಾಷೆಗಳ ಮೂಲಕ ಸಮಾಜದ ಏಳಿಗೆಗಾಗಿ ಶ್ರಮಿಸಿದವರಲ್ಲಿ ಅಂಬಿಗರ ಚೌಡಯ್ಯ ಸಹ ಒಬ್ಬರು. ಇವರು ತಮ್ಮ ಕಾಯಕದ ಮೂಲಕ ಸಮಾಜವನ್ನು ತಿದ್ದಲು ಪ್ರಯತ್ನಿಸಿದ ಮಹಾಪುರುಷ ಎಂದು ಬಣ್ಣಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮ ಸಂಯೋಜಕ ಮಣಜೂರು ಮಂಜುನಾಥ್ ಮಾತನಾಡಿ, ಅಂಬಿಗರ ಚೌಡಯ್ಯ ಕೇವಲ ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟುಹಾಕುವ ಅಂಬಿಗ ಮಾತ್ರವಲ್ಲ, ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲ್ಯವುಳ್ಳವ ಎಂದು ಹೇಳಿಕೊಳ್ಳುವುದರಲ್ಲಿ ತನ್ನ ಅನುಭಾವದೃಷ್ಟಿಯನ್ನು ಪ್ರಕಟಿಸಿದ್ದಾರೆ ಎಂದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್, ಕನ್ನಡ ಸಂಘದ ಉಸ್ತುವಾರಿ ಶಿಕ್ಷಕ ಕೆ.ಗೋಪಾಲಕೃಷ್ಣ, ಶಿಕ್ಷಕರಾದ ಬಿ.ಡಿ.ರಮ್ಯ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಕೆ.ಬಿ.ನಯನಾ ಇತರರು ಇದ್ದರು.