ಚಿತ್ರದುರ್ಗ: ಐತಿಹಾಸಿಕ ಕೋಟೆನಾಡನ್ನು 211 ವರ್ಷಗಳ ಕಾಲ ಆಳ್ವಿಕೆ ನಡೆಸಿದ 11 ಪಾಳೆಯಗಾರರಲ್ಲಿ ಬಿಚ್ಚುಗತ್ತಿ ಭರಮಣ್ಣನಾಯಕರು ಶೌರ್ಯಕ್ಕೆ ಹೆಸರಾಗಿದ್ದವರು ಎಂದು ಸಾಹಿತಿ ಮೃತ್ಯುಂಜಯಪ್ಪ ಹೇಳಿದರು
ಬಿಚ್ಚುಗತ್ತಿ ಭರಮಣ್ಣನಾಯಕರ 333ನೇ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಉಚ್ಚಂಗಿಯಲ್ಲಮ್ಮ ದೇಗುಲದಲ್ಲಿ ಗುರುವಾರ ನಡೆದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭರಮಣ್ಣನಾಯಕರು ಕೆರೆ, ಕಟ್ಟೆ, ಗುಡಿ, ಗೋಪುರ, ಮಠಗಳನ್ನು ಕಟ್ಟಿಸಿದ್ದಾರೆ. ಐತಿಹಾಸಿಕ ಚಿತ್ರದುರ್ಗದ ಕೋಟೆ ವಿಶ್ವ ಭೂಪಟದಲ್ಲಿ ಸೇರಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು ಎಂದು ಒತ್ತಾಯಿಸಿದರು.
ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ, ಭರಮಣ್ಣನಾಯಕರು ಯುದ್ಧದಲ್ಲಿ ಒಮ್ಮೆ ಕತ್ತಿ ಹೊರಗೆ ತೆಗೆದರೆ ಶತ್ರುಗಳ ಸಂಹಾರಕ್ಕಾಗಿ ಹೋರಾಡುತ್ತಿದ್ದ ಧೈರ್ಯಶಾಲಿಯಾಗಿದ್ದರು. ಹೀಗಾಗಿ ಬಿಚ್ಚುಗತ್ತಿ ಬಿರುದು ಅವರಿಗೆ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಸ್ಮರಿಸಿದರು.
ರಾಜಾವೀರ ಮದಕರಿನಾಯಕ, ಕಿರಣ್‌ಕುಮಾರ್, ನಿವೃತ್ತ ರೈಲ್ವೆ ಅಧಿಕಾರಿ ರಾಜಶೇಖರಪ್ಪ, ಕೃಷ್ಣಮೂರ್ತಿ, ಸುರೇಶ್, ರಘು, ಅಜಯ್ ಮದಕರಿ, ಗಿರಿಸಾಗರ್ ಮದಕರಿ, ಟಿ.ರಾಜಣ್ಣ, ಕೃಷ್ಣಮೂರ್ತಿ, ಪವನ್, ನಾಗರಾಜ್, ಬಿ.ಎನ್.ಮಂಜುನಾಥ್, ಕೆ.ಟಿ.ನಾಗರಾಜ್ ಇತರರಿದ್ದರು.