ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಪುತ್ರನ ಉಪದ್ರವ ತಾಳದೇ ತಂದೆಯೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಹೈ ಪ್ರೊಫೈಲ್ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ತಂಡ, ಹತ್ಯೆಯಾಗಿರುವ ಅಖಿಲ್ ತಂದೆ ಭರತ್ ಮಹಾಜನಶೇಠ್(ಜೈನ್) ಸೇರಿ 7 ಜನರನ್ನು ಬಂಧಿಸಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಲಾಭೂರಾಮ, ಕೇಶ್ವಾಪುರ ಕುಸುಗಲ್ಲ ರಸ್ತೆ ಅರಿಹಂತನಗರದ ಕಟ್ಟಡ ಸಲಕರಣೆಗಳ ವ್ಯಾಪಾರಿ ಭರತ್ ಮಹಾಜನಶೇಠ್(ಜೈನ್), ಹಂತಕರು ಮತ್ತು ಮಧ್ಯವರ್ತಿಗಳಾದ ಮೊಹ್ಮದ್ ಹನೀಫ್, ರೆಹಮಾನ್, ಮಹಾದೇವ ನಾಲವಾಡ, ಸಲಾವುದ್ದೀನ್ ಮೌಲ್ವಿ, ಪ್ರಭಯ್ಯ, ಹನೀಫ್ನನ್ನು ಬಂಧಿಸಲಾಗಿದೆ. ಇನ್ನಷ್ಟು ತನಿಖೆಯಿಂದ ಅಖಿಲ್ ಕೊಲೆಗೆ ನಿಖರ ಕಾರಣ ತಿಳಿಯಲಿದೆ ಎಂದರು.
ಆರು ದಿನದ ಹಿಂದೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಕೈಗೊಂಡು ಆರೋಪಿಗಳ ಶೋಧ ನಡೆಸಿದರು. ನಾಪತ್ತೆ ದೂರಿಗೂ ಹಾಗೂ ಅಖಿಲ್ ತಂದೆ ಭರತ್ ಹೇಳಿಕೆಗೂ ವ್ಯತ್ಯಾಸವಿತ್ತು. ಇದೇ ಆಧಾರದಲ್ಲಿ ತನಿಖೆ ಚುರುಕುಗೊಳಿಸಿದಾಗ ಭರತ್, ತನ್ನ ಮಗನ ಹತ್ಯೆಗೆ 10 ಲಕ್ಷ ರೂ. ಸುಪಾರಿ ಕೊಟ್ಟಿರುವುದು ಬಯಲಾಗಿದೆ. ಡಿ. 1ರಂದು ಅಖಿಲ್ನನ್ನು ಮನೆಯಿಂದಲೇ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ, ಕಲಘಟಗಿಯಿಂದ 2-3 ಕಿ.ಮೀ. ದೂರ ಕರೆದೊಯ್ದು ಶೆಡ್ ಒಂದರಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ ಅದನ್ನು ಮುಚ್ಚಿ ಹಾಕಲು ಯತ್ನಿಸಿದ್ದರು.
ಸುಪಾರಿ ಪಡೆದವರ ಪತ್ತೆಗೆ 8 ತಂಡಗಳನ್ನು ರಚಿಸಲಾಗಿತ್ತು. ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಗೋಪಾಲ ಬ್ಯಾಕೋಡ, ಎಸಿಪಿ ವಿನೋದ ಮುಕ್ತೇದಾರ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಉಳವೆಪ್ಪ ಸಾತೇನಹಳ್ಳಿ, ಜಗದೀಶ ಹಂಚಿನಾಳ, ಜೆ.ಎಂ. ಕಾಲಿಮಿರ್ಚಿ, ಆನಂದ ಒನಕುದರಿ, ರಮೇಶ ಹೂಗಾರ, ಬಿ.ವಿ. ಮಂಟೂರ, ಜಯಪಾಲ ಪಾಟೀಲ, ಪಿಎಸ್ಐಗಳಾದ ಸದಾಶಿವ ಕಾನಟ್ಟಿ, ಶರಣು ದೇಸಾಯಿ, ಬಿ.ಎನ್. ಸಾತನ್ನವರ ನೇತೃತ್ವದ ತಂಡ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ ಎಂದು ಆಯುಕ್ತ ಲಾಭೂರಾಮ ತಿಳಿಸಿದರು. ಈ ತಂಡಕ್ಕೆ 50 ಸಾವಿರ ರೂ. ನಗದು ಬಹುಮಾನ ನೀಡಿ ಶ್ಲಾಘಿಸಿದರು.
ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಗೋಪಾಲ ಬ್ಯಾಕೋಡ, ಪೊಲೀಸ್ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.
ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆ
ಬಂಧಿತರ ಹೇಳಿಕೆ ಆಧರಿಸಿ ಮಂಗಳವಾರ ಕಲಘಟಗಿ ತಾಲೂಕಿನ ದೇವಿಕೊಪ್ಪ ಅರಣ್ಯ ಪ್ರದೇಶದ ಶೆಡ್ ಒಂದರ ಬಳಿ ಅಖಿಲ್ ಶವ ಹೂತಿರುವುದನ್ನು ಪತ್ತೆ ಹಚ್ಚಲಾಯಿತು. ಅಖಿಲ್ ಬಾಯಿಗೆ ಬಟ್ಟೆ ತುರುಕಿ, ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಶವವನ್ನು ಹೂತಿರುವುದು ಕಂಡುಬಂದಿದೆ. ಬುಧವಾರ ಉಪ ವಿಭಾಗಾಧಿಕಾರಿಯವರ ಸಮಕ್ಷಮದಲ್ಲಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.