ಕಲಬುರಗಿ: ಭಾರತೀಯ ಶಾಸ್ತ್ರೀಯ ನೃತ್ಯ ಪರಂಪರೆಯ ಪ್ರಮುಖ ಕಲಾ ಪ್ರಕಾರವಾದ ಭರತನಾಟ್ಯದಿಂದ ದೈವಿಕ ಭಾವ ಮೂಡುತ್ತದೆ ಎಂದು ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪಂ.ಶ್ರೀನಿವಾಸಾಚಾರ್ಯ ಪದಕಿ ಹೇಳಿದರು.
ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ನೃತ್ಯಪ್ರಿಯಾ ನೃತ್ಯ ಕಲಾಕೇಂದ್ರದಿಂದ ಆಯೋಜಿಸಿದ್ದ ೮ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅರಸರು ದೇವಾಲಯಗಳಲ್ಲಿ ಭರತನಾಟ್ಯ ಪ್ರದರ್ಶನ ಏರ್ಪಡಿಸಿ, ಕಲಾಸೇವೆಗೆ ಅವಕಾಶ ಮಾಡಿಕೊಡುತ್ತಿದ್ದರು ಎಂಬುದಕ್ಕೆ ಪುರಾತನ ಮಂದಿರಗಳಲ್ಲಿ ನೃತ್ಯ ಭಂಗಿಯ ಶಿಲ್ಪಗಳನ್ನು ಕೆತ್ತಿರುವುದೇ ಸಾಕ್ಷಿಯಾಗಿದೆ. ನೃತ್ಯ ಸೇವೆಯೂ ದೇವರ ಪೂಜೆಯ ಒಂದು ಭಾಗವಾಗಿತ್ತು. ಇದೊಂದು ಪವಿತ್ರ ಕಲೆ ಎಂದರು.
ಕಲಬುರಗಿ ರಂಗಾಯಣದ ನಿಕಟಪೂರ್ವ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ಶಾಸ್ತಿಯ ನೃತ್ಯ ಕಲಿಕೆಯ ಕಾರಣದಿಂದ ದೇಹ, ಬುದ್ಧಿ, ಮನಸ್ಸು ಏಕಾಗ್ರತೆಗೊಂಡು ಸಮತೋಲನದಲ್ಲಿ ಇರಲು ಸಾಧ್ಯವಾಗುತ್ತದೆ. ಕಲಬುರಗಿಯಲ್ಲಿ ನೃತ್ಯ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿರುವುದು ಸಂತಸದ ಸಂಗತಿ ಎಂದು ಶ್ಲಾಘಿಸಿದರು.
ಸಂಸ್ಕೃತ ವಿದ್ವಾಂಸ ಪಂ.ಗಿರೀಶಾಚಾರ್ಯ ಅವಧಾನಿ, ವೆಂಕಟೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ನಿರ್ದೇಶಕ ಗೋವರ್ಧನ ದೇಶಪಾಂಡೆ, ಶ್ರೀರಾಘವೇಂದ್ರಸ್ವಾಮಿ ಮಠದ ಅಧ್ಯಕ್ಷ ರಮೇಶ ವಕೀಲ, ಅರವಿಂದೋ ಸೊಸೈಟಿ ಅಧ್ಯಕ್ಷ ಶ್ರೀಪಾದರಾವ ಘಂಟೋಜಿ, ವೆಂಕಟೇಶ್ವರ ದೇವಾಲಯದ ಕಾರ್ಯದರ್ಶಿ ಪಿ.ಎನ್.ಜೋಶಿ ಇತರರಿದ್ದರು.
ನೃತ್ಯಪ್ರಿಯಾ ನೃತ್ಯ ಕಲಾಕೇಂದ್ರದ ಸ್ಥಾಪಕಿ ಐಶ್ಚರ್ಯ ಕುಲಕರ್ಣಿ ನಿರ್ದೇಶನದಲ್ಲಿ ಶ್ರೀಕೃಷ್ಣ ಲೀಲೆಯ ಇಪ್ಪತ್ತೊಂದು ವಿವಿಧ ನೃತ್ಯ ಪ್ರದರ್ಶನಗಳನ್ನು ಕೇಂದ್ರದ ಅರವತ್ತು ವಿದ್ಯಾರ್ಥಿನಿಯರು ಪ್ರಸ್ತುತಪಡಿಸಿದರು. ಭಾರತೀಶ ಬೆಳಗುಂಪಿ ನಿರೂಪಣೆ ಮಾಡಿದರು. ರಮೇಶ ಕುಲಕರ್ಣಿ ವಂದಿಸಿದರು. ಕಲಾವಿದರಿಗೆ ಮುಖವರ್ಣಿಕೆ ಮಾಡಿದ ಧಾರವಾಡದ ಸಂತೋಷ ಮಾಹಲೆ ಅವರನ್ನು ಸತ್ಕರಿಸಲಾಯಿತು.