ಜಿಲ್ಲೆ

ಭರತನಾಟ್ಯ ಕಲೆಯನ್ನು ಉಳಿಸಿ, ಬೆಳೆಸಿ

ಮೈಸೂರು: ಮೊದಲೆಲ್ಲ ಭರತನಾಟ್ಯ ಕೆಲವರಿಗೆ ಸೀಮಿತವಾಗಿತ್ತು. ಪ್ರಸ್ತುತ ಎಲ್ಲ ವರ್ಗದ ಜನತೆ ಭರತನಾಟ್ಯ ಕಲಿಯುತ್ತಿದ್ದಾರೆ ಎಂದು ಶಾಸಕ ಕೆ. ಹರೀಶ್‌ಗೌಡ ಹೇಳಿದರು.

ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ವತಿಯಿಂದ ಮಂಚೇಗೌಡನ ಕೊಪ್ಪಲಿನ ಕಲೆಮನೆ ಸಭಾಂಗಣದಲ್ಲಿ ಭಾನುವಾರ ನಡೆದ 51ನೇ ಅಂತಾರಾಷ್ಟ್ರೀಯ ನಿರಂತರ ಕಲೆಮನೆ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಭರತನಾಟ್ಯ ಹಾಗೂ ಯೋಗ ವಿಶ್ವಕ್ಕೆ ಭಾರತದ ಕೊಡುಗೆ. ಇವುಗಳು ದೈಹಿಕ ಕಸರತ್ತಿಗೆ ಸಂಬಂಧಿಸಿದವು. ಒಂದು ಗಂಟೆ ಭರತನಾಟ್ಯ ಪ್ರದರ್ಶಿಸಬೇಕಾದರೆ ಅವರ ದೇಹ ಎಷ್ಟು ಸದೃಢವಾಗಿರಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು. ಭರತನಾಟ್ಯ ಕಲೆಯನ್ನು ಉಳಿಸಿ, ಬೆಳೆಸಬೇಕು. ನಮಗೆ ಗೊತ್ತಿರುವ ಈ ವಿದ್ಯೆಯನ್ನು ಮುಂದಿನ ಪೀಳಿಗೆಗೆ ದಾಟಿಸಬೇಕು ಎಂದರು. ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ವೀಕ್ಷಿಸಿದಾಗ ನಮ್ಮ ಕಲೆ, ಸಂಸ್ಕೃತಿಯ ಬಗ್ಗೆ ಹೆಮ್ಮೆಯಾಗುತ್ತದೆ ಎಂದರು.

ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಟಿ. ಅಮರನಾಥ್(ವೈದ್ಯಕೀಯ), ರಂಗನಾಥ್ ಮೈಸೂರು(ಪತ್ರಿಕೋದ್ಯಮ), ಬೆಂಗಳೂರಿನ ಶಿವಪ್ರಿಯ ನೃತ್ಯಶಾಲೆಯ ಸಂಸ್ಥಾಪಕ ಡಾ.ಸಂಜಯ್ ಶಾಂತಾರಾಮ್ ಹಾಗೂ ಪಾರ್ಶ್ವನಾಥ್(ನೃತ್ಯ) ಅವರಿಗೆ ಕಲೆಮನೆ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ವಿ. ಚೇತನ್, ಕೇಂದ್ರದ ಸಂಸ್ಥಾಪಕ ಡಾ.ಕೆ. ಕುಮಾರ್, ಖಜಾಂಚಿ ಕೆ.ಎಂ. ಲೇಖಾ ಹಾಗೂ ಜಂಟಿ ಕಾರ್ಯದರ್ಶಿ ಕೆ.ಎಂ. ನಿಧಿ, ಕೇಂದ್ರದ ಅಧ್ಯಕ್ಷೆ ಡಾ.ಜಿ. ಮಾಲತಿ, ಡಾ.ಪೂರ್ಣಿಮಾ ಅಮರನಾಥ್, ಕಾಂಗ್ರೆಸ್ ಮುಖಂಡರಾದ ಆನಂದ್, ರವಿ ಮಂಚೇಗೌಡನ ಕೊಪ್ಪಲು ಹಾಗೂ ರವಿ ಇದ್ದರು.