ತುಮಕೂರು: ಹಸಿದವರಿಗೆ ಅನ್ನ ಇಕ್ಕುವುದು, ಜ್ಞಾನ ನೀಡುವುದು ನಮ್ಮ ಮಠಗಳ ಪರಂಪರೆ. ಜಗತ್ತಿನಲ್ಲಿ ವಿಶೇಷ ಸ್ಥಾನ ಪಡೆದಿರುವ ಭರತ ಖಂಡ ಧಾರ್ಮಿಕ ಬೀಡು ಎಂದು ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಬಣ್ಣಿಸಿದರು.
ತಾಲೂಕಿನ ಚಿಕ್ಕತೊಟ್ಲುಕೆರೆಯ ಅಟವಿ ಸುಕ್ಷೇತ್ರದಲ್ಲಿ ಅಟವಿ ಮಹಾಸ್ವಾಮಿಗಳ 124ನೇ ಪುಣ್ಯಸ್ಮರಣೋತ್ಸವ, ಮಠಾಧ್ಯಕ್ಷರಾದ ಅಟವಿ ಶಿವಲಿಂಗ ಸ್ವಾಮೀಜಿಗಳ ಪೀಠಾರೋಹಣ ರಜತ ಮಹೋತ್ಸವ ಹಾಗೂ ಅಟವಿ ಮಲ್ಲಿಕಾರ್ಜುನ ದೇವರ ನಿರಂಜನ ನಿರಾಭಾರಿ ಚರ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಧರ್ಮಸಭಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಹಲವಾರು ಧರ್ಮಗಳು ಪ್ರಚಾರಕ್ಕಾಗಿ ಶ್ರದ್ಧಾ ಕೇಂದ್ರ ಸ್ಥಾಪಿಸಿ ನಾಡಿನುದ್ದಕ್ಕೂ ಪ್ರಚಾರ ಮಾಡುತ್ತಿವೆ. ನಮ್ಮ ಸಮಾಜದ ಜೀವನಾಡಿಯಾಗಿರುವ ರಾಜ್ಯದ ಅನೇಕ ಮಠಗಳು ವಿಶೇಷ ಪರಂಪರೆ ಹೊಂದಿವೆ ಎಂದರು. ಮಠಗಳು ತಾಯಿಯ ಅಂತ@ಕರಣದ ಮಡಿಲು. ಹಂಬಲಿಸಿ ಬಂದವರಿಗೆ ಆಶ್ರಯ ನೀಡಿ, ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುವಂತಹವು. ಈ ಮೂಲಕ ಮಠಗಳು ಕೇವಲ ಧಾರ್ಮಿಕ ಕೇಂದ್ರವಾಗಿಲ್ಲ, ಸಮಾಜ ಸೇವಾ ಕೇಂದ್ರಗಳಾಗಿಯೂ ಇವೆ. ನಮ್ಮ ಮಠಗಳ ದಾಸೋಹ ಸೇವೆ ಆಧುನಿಕ ಕರ್ನಾಟಕದಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಾಡಿನ ಅಂತರಂಗ-ಬಹಿರಂಗ ಕಟ್ಟುವಲ್ಲಿ ಕ್ರಿಯಾಶೀಲವಾಗಿದೆ ಎಂದು ತಿಳಿಸಿದರು.
ಧಾರ್ಮಿಕ ಸಂಕಷ್ಟದಲ್ಲಿ ಇದ್ದೇವೆ: ನಾವಿಂದು ಧಾರ್ಮಿಕ ಸಂಕಷ್ಟ ಕಾಲದಲ್ಲಿದ್ದೇವೆ. ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಸ್ವಾಮೀಜಿಗಳ ಪಾತ್ರ ಪ್ರಮುಖವಾಗಿದೆ. ಜನಗಣತಿಯಂತೆ ಮನೆಮೆನೆಯಲ್ಲೂ ದೀಕ್ಷಾ ಗಣತಿ ಮಾಡಬೇಕಾದ ಅಗತ್ಯವಿದೆ. ಲಿಂಗ ದೀಕ್ಷೆ ಕಡ್ಡಾಯ ಮಾಡಬೇಕಾಗಿದೆ. ಸ್ವಾಮೀಜಿ ಭಕ್ತರ ಮನೆ ಹೊಕ್ಕು ಲಿಂಗ ಧೀಕ್ಷೆ ಮಾಡಿಸಬೇಕು ಎಂದು ಹಿರೇಮಠಾಧ್ಯಕ್ಷ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕಳೆದ 25 ವರ್ಷಗಳಿಂದ ಮಠದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವ ಅಟವಿ ಶಿವಲಿಂಗ ಸ್ವಾಮೀಜಿಗಳಿಗೆ ಈ ಭಾಗದಲ್ಲಿ ಮರೆಯಾಗಿರುವ ಪುರಾಣ, ಪ್ರವಚನ ಪರಂಪರೆ ಸೃಷ್ಟಿಸಿದ ಕೀರ್ತಿ ಸಲ್ಲಬೇಕು. 79ನೇ ವಯಸ್ಸು ಸಂದಿರುವ ಸಂದರ್ಭದಲ್ಲಿ ಸ್ವಾಮೀಜಿಗಳು ಮಠಕ್ಕೆ ಸಮರ್ಥ ಉತ್ತರಾಧಿಕಾರಿ ನೇಮಕ ಮಾಡಿದ್ದಾರೆ. ಸೋಮವಾರ ಅಟವಿ ಶಿವಲಿಂಗ ಸ್ವಾಮೀಜಿಗಳು ಮಲ್ಲಿಕಾರ್ಜುನ ದೇವರಿಗೆ ತಮ್ಮ ಗುರುತ್ವವನ್ನು ಧಾರೆ ಎರೆಯಲಿದ್ದಾರೆ ಎಂದು ಹೇಳಿದರು.
ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಸಾಸನೂರು ಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಅರಕೆರೆ ಮಠದ ಶ್ರೀ ಶಿವಲಿಂಗ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿ, ಗುಡ್ಡದಾನ್ವೇರಿ ಮಠದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ, ಅಟವಿ ಮಲ್ಲಿಕಾರ್ಜುನ ದೇವರು, ತುಮಕೂರು ನಗರ ವೀರಶೈವ ಸಮಾಜ ಅಧ್ಯಕ್ಷ, ಮಠದ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಶೇಖರ್, ಮಠದ ಆಡಳಿತ ಮಂಡಳಿ ಟ್ರಸ್ಟಿಗಳಾದ ಸಿ.ಮಹದೇವಪ್ಪ, ಬೆಟ್ಟಯ್ಯ, ಜಗದೀಶ್ಚಂದ್ರ, ರವಿಶಂಕರ್, ಮಂಜುನಾಥ್ ಬದ್ನಾಳ್, ಮುಖಂಡರಾದ ಕೋರಿ ಮಂಜುನಾಥ್, ಓಹಿಲೇಶ್ವರ್ ಉಪಸ್ಥಿತರಿದ್ದರು.
ಜಂಗಮ ದೀಕ್ಷೆ ಅನುಗ್ರಹ ಕಾರ್ಯಕ್ರಮ: ಸೋಮವಾರ ಬೆಳಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ ನಿರಾಭಾರಿ ನಿರಂಜನ ಜಂಗಮ ದೀಕ್ಷೆ ಚಿನ್ಮಯಿ ಅನುಗ್ರಹ ಕಾರ್ಯಕ್ರಮ ನಡೆಯಲಿದೆ. ಅಟವಿ ಶಿವಲಿಂಗ ಸ್ವಾಮೀಜಿ ಅಧ್ಯಕ್ಷತೆಯ ಈ ಕಾರ್ಯಕ್ರಮದಲ್ಲಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ತಾಳಗುಪ್ಪ ಮಠದ ಶ್ರೀ ಸಿದ್ಧವಿರ ಸ್ವಾಮೀಜಿ, ಅರಕೆರೆಮಠದ ಶ್ರೀ ಶಿವಲಿಂಗ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಶ್ರೀ ಕಾರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಗುಡ್ಡದ ಆನ್ವೇರಿ ಮಠದ ಶಿವಯೋಗೀಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಮಲ್ಲಿಕಾರ್ಜುನ ದೇವರಿಗೆ ಚಿನ್ಮಯ ಅನುಗ್ರಹ ನೀಡಲಾಗುವುದು.
ಗದ್ದುಗೆಗೆ ಮಹಾಪೂಜೆ: ಭಾನುವಾರ ಬೆಳಗ್ಗೆ ಶ್ರೀ ಮಠದ ಅಟವಿ ಶಿವಲಿಂಗ ಸ್ವಾಮೀಜಿ ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹಾಗೂ ಸಾಸನೂರು ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ನಂತರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ ಹಮ್ಮಿಕೊಳ್ಳಲಾಗಿತ್ತು.
ಈಗ ತ್ರಿಕಾಲ ಪೂಜೆ ಮಾಡುವವರಿಲ್ಲ. ಕನಿಷ್ಠ ವಾರಕ್ಕೊಮ್ಮೆ ಸಾಮೂಹಿಕ ಶಿವಪೂಜೆ ಮಾಡುವಂತಹ ಪದ್ಧತಿ ಅನುಸರಿಸಬೇಕು. ಮಠಗಳಲ್ಲಿ ಇಂತಹ ಪೂಜೆಗೆ ವ್ಯವಸ್ಥೆಯಾಗಬೇಕು. ಈ ಮೂಲಕ ನಮ್ಮ ಆಚಾರ, ವಿಚಾರ ಸಂಪ್ರದಾಯ, ಪರಂಪರೆಯನ್ನು ಉಳಿಸುವ ಪ್ರಯತ್ನ ಮಾಡಬೇಕಿದೆ.
| ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹಿರೇಮಠ
ಈಗಿನವರಿಗೆ ಧರ್ಮ ಶ್ರದ್ಧೆ ಕಡಿಮೆಯಾಗಿದೆ. ನಮ್ಮ ಆಚಾರವಿಚಾರಗಳನ್ನು ಮರೆಯುತ್ತಿದ್ದಾರೆ. ನಮ್ಮ ಆಚಾರ, ಪದ್ಧತಿ, ಸಂಸ್ಕಾರ, ಪರಂಪರೆಯ ಮಹತ್ವವನ್ನು ಹಿರಿಯರು ಮಕ್ಕಳಿಗೆ ತಿಳಿಸಬೇಕು. ಭಕ್ತರಿಗೆ ಸರಿಯಾದ ಮಾರ್ಗದರ್ಶನವನ್ನು ಸ್ವಾಮಿಗಳು ನೀಡಬೇಕು. ಅಟವಿ ಮಠಕ್ಕೆ ಉತ್ತರಾಧಿಕಾರಿಯಾಗಿ ಮಲ್ಲಿಕಾರ್ಜುನ ದೇವರನ್ನು ನೇಮಿಸಲಾಗಿದೆ. ಇವರನ್ನು ಭಕ್ತರ ಮಡಿಲಿಗೆ ಹಾಕುತ್ತಿದ್ದೇವೆ. ಭಕ್ತಿಯ ಹಾಲು ಕುಡಿಸಿ ಶಕ್ತಿ ತುಂಬಿರಿ.
| ಅಟವಿ ಶಿವಲಿಂಗ ಸ್ವಾಮೀಜಿ ಅಟವಿ ಸುಕ್ಷೇತ್ರ