ಪಾಂಡವಪುರ: ಭಯೋತ್ಪಾದಕರನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷದ ನಾಯಕರು ದೇಶದ್ರೋಹ ಪ್ರಕರಣದಲ್ಲಿ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ದೇಶದ ಸುರಕ್ಷತೆ ಬಗ್ಗೆ ಹಗುರವಾಗಿ ಮಾತನಾಡಿದರೆ ಬಿಜೆಪಿ ಎಂದಿಗೂ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.
ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕುಕ್ಕರ್‌ನಲ್ಲಿ ಅಕ್ಕಿ ಬೇಯಿಸುವುದನ್ನು ನೋಡಿದ್ದೇನೆಯೇ ಹೊರತು ಬಾಂಬ್ ಬೇಯಿಸುವುದನ್ನು ಎಂದೂ ನೋಡಿಲ್ಲ. ಕುಕ್ಕರ್‌ನಲ್ಲಿ ಬಾಂಬ್ ಇಟ್ಟು ಬ್ಲಾಸ್ಟ್ ಮಾಡಿದವರನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಬಲಿಸುವ ಮೂಲಕ ಭಯೋತ್ಪಾದಕರ ಮೇಲೆ ಅನುಕಂಪ ತೋರಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಧರ್ಮಾಂಧ ಟಿಪ್ಪುವಿನ ಕನವರಿಕೆಯಾಗಿದೆ. ಕಾಂಗ್ರೆಸ್‌ನ ವರಿಷ್ಠ ನಾಯಕರಾದ ಸೋನಿಯಾ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ದೇಶದ ಪರವೋ ಅಥವಾ ಭಯೋತ್ಪಾದಕರ ಪರವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ನಾಯಕರು ಮತ್ತೆ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದ್ದಾರೆ. ಕರ್ನಾಟಕದ ಜನ ಜಾಗೃತರಾಗಿದ್ದಾರೆ. ದಕ್ಷಿಣ ಕರ್ನಾಟಕ ಸೇರಿದಂತೆ ಇಡೀ ರಾಜ್ಯದಲ್ಲಿ ಬಿಜೆಪಿ ಪರ ಬಿರುಗಾಳಿ ಬೀಸುತ್ತಿದೆ. ಸಿದ್ದರಾಮಯ್ಯ ಅವರಿಗೆ ನಿದ್ದೆಯಲ್ಲೂ ಮೋದಿ ಕಾಡುತ್ತಿದ್ದಾರೆ. ಅದಕ್ಕಾಗಿ ಬೆಳಗ್ಗೆ ಎದ್ದರೆ ಮೋದಿ ಜಪ ಮಾಡುತ್ತಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜನರಿಗೆ ಏನೂ ಮಾಡಿಲ್ಲ. 70 ವರ್ಷಗಳ ಆಡಳಿತ ನಡೆಸಿದ್ದ ಕಾಂಗ್ರೆಸ್ಸಿಗೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗಿರಲಿಲ್ಲ. ಬಿಜೆಪಿ ಕೇವಲ 2 ವರ್ಷದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 30 ಲಕ್ಷ ಕುಟುಂಬಗಳಿಗೆ ಕುಡಿಯುವ ನೀರು ಒದಗಿಸಿದೆ. ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎನ್ನುವವರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಸೇರಿದಂತೆ ಕೇಂದ್ರ ಸರ್ಕಾರ 6 ಸಾವಿರ ಕಿಮೀ ಹೆದ್ದಾರಿ ಹಾಗೂ ರಾಜ್ಯ ಸರ್ಕಾರ 3 ಸಾವಿರ ಕಿಮೀ ರಾಜ್ಯ ಹೆದ್ದಾರಿ ನಿರ್ಮಿಸಿರುವ ಬಗ್ಗೆ ತಿಳಿದುಕೊಳ್ಳಲಿ ಎಂದರು.
ದುಡಿಯುವ ವರ್ಗಕ್ಕೆ ಶಕ್ತಿ ತುಂಬಬೇಕು ಎಂಬ ಕಾರಣಕ್ಕೆ ರೈತರು ಮತ್ತು ನೇಕಾರರ ಬಡ ಮಕ್ಕಳಿಗಾಗಿ ವಿದ್ಯಾ ನಿಧಿ ಸ್ಥಾಪಿಸಲಾಗಿದೆ. ನೇಕಾರ ಸಮ್ಮಾನ್ ಯೋಜನೆಯಡಿ 45 ಸಾವಿರ ನೇಕಾರರ ಖಾತೆಗೆ 5 ಸಾವಿರ ರೂ. ಹಾಕಲಾಗಿದೆ. ಸ್ವಾಮಿ ವಿವೇಕಾನಂದ ಅವರ ಹೆಸರಿನಲ್ಲಿ ಪ್ರತಿ ತಾಲೂಕಿನಲ್ಲಿ 2 ಯುವಕರ ಸಂಘಗಳಿಗೆ 5 ಲಕ್ಷ ರೂ. ಹಾಗೂ ಎರಡು ಮಹಿಳಾ ಸಂಘಗಳಿಗೆ 5 ಲಕ್ಷ ರೂ. ನೀಡಿ ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು.
ರೈತರ ಬಗ್ಗೆ ಮಾತನಾಡೋಕ್ಕೆ ಜೆಡಿಎಸ್, ಕಾಂಗ್ರೆಸ್‌ನವರಿಗೆ ಹಕ್ಕಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅನ್ನಭಾಗ್ಯದ ಅಕ್ಕಿಗೂ ಕನ್ನ ಹಾಕಿತ್ತು. ಸಣ್ಣ ನೀರಾವರಿ, ದೊಡ್ಡ ನೀರಾವರಿ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹಾಸಿಗೆ ಖರೀದಿ, ದಿಬ್ಬಿನಲ್ಲೂ ಭ್ರಷ್ಟಾಚಾರ ನಡೆಸಿದೆ. ನಾನು ನೀರಾವರಿ ಮಂತ್ರಿಯಾಗಿದ್ದಾಗ ತುಕ್ಕು ಹಿಡಿದಿದ್ದ ಕೆಆರ್‌ಎಸ್ ಡ್ಯಾಂ ಗೇಟ್‌ಗಳನ್ನು ದುರಸ್ತಿಪಡಿಸಲು 80 ಕೋಟಿ ರೂ. ಅನುದಾನ ನೀಡಿದ್ದೇನೆ. ವಿಶ್ವೇಶ್ವರಯ್ಯ ನಾಲೆ ಆಧುನೀಕರಣಕ್ಕೆ 325 ಕೋಟಿ ರೂ.ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನೀರಾವರಿ ಕ್ಷೇತ್ರಕ್ಕೆ 606 ಕೋಟಿ ರೂ., ಕೆರೆಗಳನ್ನು ತುಂಬಿಸಲು 454 ಕೋಟಿ ರೂ.ಅನುದಾನ ಕೊಡುತ್ತೇವೆ. ಕಾವೇರಿ ನೀರಿನಲ್ಲಿ ರೈತ ಬೆವರು ಬೆರೆತರೆ ಬಂಗಾರ ಬೆಳೆಯಬಹುದು ಎಂದು ಹೇಳಿದರು.
ಬಿಜೆಪಿ ಸರ್ಕಾರ ರಚಿಸುವುದು ಖಚಿತ:
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ದೇಶದ ಯಾವುದೇ ಮನೆಗೆ ಹೋದರೂ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಸವಲತ್ತುಗಳನ್ನು ಪಡೆದುಕೊಳ್ಳದ ಮನೆಗಳು ಸಿಗುವುದಿಲ್ಲ. ಬಿಜೆಪಿ ಸರ್ಕಾರದ ಪ್ರತಿನಿಧಿಗಳು ಎಲ್ಲ ವರ್ಗದ ಜನರು, ಮಹಿಳೆಯರು ಮತ್ತು ಯುವಕರ ಏಳಿಗೆಗಾಗಿ ಶ್ರಮಿಸಿದ್ದಾರೆ. ಅಂಬೇಡ್ಕರ್, ವಾಲ್ಮೀಕಿ ಜಯಂತಿ ಜತೆಗೆ ಕನಕ ಪೀಠ ಸ್ಥಾಪನೆ ಮಾಡಿದ್ದು ಬಿಜೆಪಿ ಸರ್ಕಾರ. ಕಾಂಗ್ರೆಸ್ ಹಣಬಲ, ತೋಳ್ಬಲ ಮತ್ತು ಜಾತಿಯ ವಿಷ ಬೀಜ ಬಿತ್ತಿ ಚುನಾವಣೆಯಲ್ಲಿ ಗೆಲ್ಲುತ್ತೀವಿ ಅಂದುಕೊಂಡಿದ್ದಾರೆ. ಬಿಜೆಪಿ ಬಹುಮತ ಪಡೆದು ಸರ್ಕಾರ ರಚಿಸುವುದು ಸೂರ್ಯ, ಚಂದ್ರರಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. 2023ರ ಚುನಾವಣೆಯನ್ನು ಹಗುರವಾಗಿ ಭಾವಿಸಬಾರದು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳನ್ನು ಪ್ರತಿ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಬಿಜೆಪಿ ಗೆಲುವಿಗೆ ಶ್ರಮಿಸಬೇಕು. ಮಂಡ್ಯದ ಮೈಶುಗರ್ ಮತ್ತು ಪಿಎಸ್‌ಎಎಸ್‌ಕೆ ಕಾರ್ಖಾನೆಗಳ ಪ್ರಾರಂಭಕ್ಕೆ ನಾನು ಮತ್ತು ಬಸವರಾಜ ಬೊಮ್ಮಾಯಿ ಅನುದಾನ ನೀಡಿದ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಕಬ್ಬು ಅರೆಯುವಂತಾಗಿದೆ. ಕಬ್ಬಿಗೆ ಒಳ್ಳೆಯ ಬೆಲೆ ಸಿಗಬೇಕು. ಅದಕ್ಕೆ ಬೇಕಾದ ಎಲ್ಲ ಕೆಲಸಗಳನ್ನು ಮಾಡಲು ನಮ್ಮ ಸರ್ಕಾರ ಸಿದ್ಧವಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಖಾನೆಗಳು ಸ್ಥಾಪನೆಯಾಗಬೇಕು. ಅದಕ್ಕೆ ಬೇಕಾದ ಹಣಕಾಸು ವ್ಯವಸ್ಥೆಯನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಮೊಳಗಿದ ಜೈಕಾರ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ರಾಜಾಹುಲಿಗೆ ಜೈ ಎಂದು ಘೋಷಣೆಗಳನ್ನು ಕಾರ್ಯಕರ್ತರು ಕೂಗಿದರು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಾಕಷ್ಟು ಅಭಿಮಾನಿಗಳು ಯಡಿಯೂರಪ್ಪ ಭಾವಚಿತ್ರ ಪ್ರದರ್ಶಿಸಿದರು.
ಸಚಿವರಾದ ಆರ್.ಅಶೋಕ್, ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಮುಡಾ ಅಧ್ಯಕ್ಷ ಶ್ರೀನಿವಾಸ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ನಿರಂಜನ್ ಬಾಬು, ತಾಪಂ ಮಾಜಿ ಸದಸ್ಯ ಮಂಗಳಾ ನವೀನ್‌ಕುಮಾರ್, ಕೆ.ಎಲ್.ಆನಂದ್ ಇತರರು ಇದ್ದರು.
ಬಿಜೆಪಿ ಮುಖಂಡ ಡಾ.ಇಂದ್ರೇಶ್ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಮಂಡ್ಯ ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆಗಳನ್ನು ಮುಚ್ಚಿಸಿ ಮಂಡ್ಯಕ್ಕೆ ಸಕ್ಕರೆ ನಾಡು ಎಂಬ ಪದಕ್ಕೆ ಅಪವಾದ ತಂದಿದ್ದರು. ಆದರೆ, ಬಿಜೆಪಿ ಸರ್ಕಾರ ಎರಡು ಕಾರ್ಖಾನೆಗಳನ್ನು ಪ್ರಾರಂಭಿಸುವ ಮೂಲಕ ಆ ಹೆಸರಿಗೆ ಕಳೆ ತಂದಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಇದ್ಕಕಾಗಿ ಇಂದಿನಿಂದಲೇ ಸಂಕಲ್ಪ ಮಾಡೋಣ ಎಂದರು.
ಕಪ್ಪು ಬಾವುಟ ಪ್ರದರ್ಶನ
ಪ್ರತಿ ಟನ್ ಕಬ್ಬಿಗೆ 4500 ರೂ. ದರ, ಹಾಲಿಗೆ 40 ರೂ. ನಿಗದಿ ಸೇರಿದಂತೆ ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ರೈತಸಂಘ ಕಾರ್ಯಕರ್ತರು ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಕಬ್ಬಿನ ಬೆಲೆ ನಿಗದಿಗಾಗಿ ರೈತಸಂಘ ನಿರಂತರ ಪ್ರತಿಭಟನೆ ನಡೆಸುತ್ತಿದೆ. ಹಲವು ಬಾರಿ ಮುಖ್ಯಮಂತ್ರಿಗಳ ಗಮನ ಸೆಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತಸಂಘ ಕಾರ್ಯಕರ್ತರು ಆರೋಪಿಸಿದರು.