ಜಿಲ್ಲೆ

ಭಯವಿದ್ದರೆ ರಿಲೀವ್ ಆಗಿ ಹೋಗಿ ; ಪಾಲಿಕೆ ಆರೋಗ್ಯಾಧಿಕಾರಿಗೆ ಸ್ಥಾಯಿಸಮಿತಿ ಅಧ್ಯಕ್ಷ ಸೈಯದ್ ನಯಾಜ್ ತರಾಟೆ

Tumakuru

ತುಮಕೂರು: ‘ಸ್ಥಾಯಿಸಮಿತಿ ಸಭೆ ನಿರ್ಣಯಗಳನ್ನು ಜಾರಿಗೆ ತರಲು ನಿಮಗೆ ಏನಾದರೂ ಭಯ ಇದ್ದರೆ ರಿಲೀವ್ ಮಾಡಿಸಿಕೊಂಡು ಹೋಗಿ’...ಹೀಗೆಂದು ಆರೋಗ್ಯಾಧಿಕಾರಿಯನ್ನು ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಸೈಯದ್ ನಯಾಜ್ ತರಾಟೆಗೆ ತೆಗೆದುಕೊಂಡರು.

ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಬೀದಿನಾಯಿಗಳ, ಹಂದಿಗಳ ಹಾವಳಿ ನಿಯಂತ್ರಣ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಆರೋಗ್ಯ ಸ್ಥಾಯಿಸಮಿತಿ ವಿಶೇಷ ತುರ್ತುಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಮಿತಿಯಲ್ಲಿ ಏನಾದರೂ ನಿರ್ಣಯ ಕೈಗೊಂಡರೆ ಅದನ್ನು ಜಾರಿಗೊಳಿಸಬೇಕು. ಅದನ್ನು ಬಿಟ್ಟು ಸಬೂಬು ಹೇಳಬೇಡಿ. ಮೇಯರ್ ಸಮ್ಮುಖದಲ್ಲೇ ಈ ನಿರ್ಧಾರ ಕೈಗೊಂಡಿರುವುದು ಎಂದರು.

ವಿವಾದಾತ್ಮಕ ತೀರ್ಮಾನ: ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲೇ ಗೋಶಾಲೆಗಳ ರೀತಿಯಲ್ಲಿ ಬೀದಿ ನಾಯಿಗಳಿಗೆ ಆಶ್ರಯ ಒದಗಿಸುವ ನಾಯಿ ಫಾರಂ(ಡಾಗ್ ಫಾರಂ) ತೆರೆಯುವ ವಿವಾದಾತ್ಮಕ ತೀರ್ಮಾನವನ್ನು ಆರೋಗ್ಯ ಸ್ಥಾಯಿಸಮಿತಿಯಲ್ಲಿ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಡಾ.ರಕ್ಷಿತ್, ಸ್ಥಾಯಿಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಆಯುಕ್ತರ ಜತೆ ಚರ್ಚೆ ನಡೆಸಬೇಕು. ಅಲ್ಲದೆ, ಸರ್ಕಾರದ ಸುತ್ತೋಲೆ, ನ್ಯಾಯಾಲಯದ ಆದೇಶವನ್ನು ವಿವರಿಸಲು ಮುಂದಾಗುತ್ತಿದ್ದಂತೆ ಕೆರಳಿದ ನಯಾಜ್, ಜನರ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ತೀರ್ಮಾನ ಜಾರಿಗೆ ಕಾನೂನು ಭಯವಿದ್ದರೆ ಇಲ್ಲಿಂದ ರಿಲೀವ್ ಮಾಡಿಸಿಕೊಳ್ಳಿ. ಬರೀ ಮಾತಷ್ಟೇ, ನಿಮ್ಮಿಂದ ಏನೂ ಕೆಲಸ ಆಗೋಲ್ಲ ಎಂದು ಹರಿಹಾಯ್ದರು.

ರಾಷ್ಟ್ರಕ್ಕೆ ಮಾದರಿ ಕೇಂದ್ರ: ಗೋಶಾಲೆ, ಹಂದಿ ಸಾಕಾಣಿಕೆ ಹೇಗೆ ಮಾಡುತ್ತಾರೋ ಅದೇ ರೀತಿ ಬೀದಿನಾಯಿಗಳ ಸಾಕಾಣಿಕೆ ಕೇಂದ್ರ ತೆರೆಯುವ ಮೂಲಕ ರಾಜ್ಯ-ರಾಷ್ಟ್ರಕ್ಕೆ ಮಾದರಿ ಕೇಂದ್ರವನ್ನಾಗಿ ರೂಪಿಸೋಣ. ಅಜ್ಜಗೊಂಡನಹಳ್ಳಿಯಲ್ಲಿ ನಾಯಿ ಸಾಕಾಣಿಕೆ ಕೇಂದ್ರ ತೆರೆಯಲು ಶೀಘ್ರ ಕೆಲಸ ಆರಂಭಿಸಿ. ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಪಾಲಿಕೆಯಿಂದ ಮಾಡಲಾಗುವುದು. ಒಟ್ಟಾರೆ ನಗರದ ಬೀದಿಗಳಲ್ಲಿ ಬೀದಿನಾಯಿಗಳು ಇರಬಾರದಷ್ಟೇ ಎಂದು ಮೇಯರ ಬಿ.ಜಿ.ಕೃಷ್ಣಪ್ಪ ಎಚ್ಚರಿಕೆ ನೀಡಿದರು.

ಸಭೆಯಲ್ಲಿದ್ದ ಉಪಮೇಯರ್ ನಾಜೀಮಾಬಿ, ಸ್ಥಾಯಿಸಮಿತಿ ಸದಸ್ಯರಾದ ಲಕ್ಷ್ಮೀನರಸಿಂಹರಾಜು, ಬಿ.ಎಸ್.ಮಂಜುನಾಥ್, ಎ.ಶ್ರೀನಿವಾಸ್, ಶಿವರಾಂ, ಬಿ.ಎಸ್.ರೂಪಶ್ರೀ, ಕೆ.ಎಸ್.ಮಂಜುಳಾ, ಎಂ.ಪ್ರಭಾವತಿ ಅವರುಗಳು ಒಕ್ಕೊರಲಿನಿಂದ ಸಭೆಯ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿದರು.

197 ನಾಯಿ ಕಡಿತ ಪ್ರಕರಣ : ತುಮಕೂರು ನಗರದಲ್ಲಿ ಕಳೆದ ಏಪ್ರಿಲ್‌ನಿಂದ ಇದುವರೆಗೂ 197 ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದು ಕೆಲವು ಪ್ರಕರಣಗಳು ಅತ್ಯಂತ ಗಂಭೀರವಾಗಿವೆ. ಬೀದಿನಾಯಿಗಳು ಮಕ್ಕಳ ಮೇಲೆ ಎರಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು ಇವುಗಳ ನಿಯಂತ್ರಣ ಕುರಿಂತಂತೆ ಜುಲೈನಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲು ಆರೋಗ್ಯ ಶಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಸಹ ಇದುವರೆಗೂ ಕ್ರಮ ಕೈಗೊಂಡಿಲ್ಲ. ಸರ್ಕಾರದ ನಿಯಮ,ಸುತ್ತೋಲೆ, ನ್ಯಾಯಾಲಯದ ಆದೇಶ ಎನ್ನುತ್ತಲೇ ಕಾಲ ಕಳೆಯುತ್ತಿದ್ದಾರೆ ಎಂದು ಮೇಯರ್ ಸೇರಿದಂತೆ ಸ್ಥಾಯಿಸಮಿತಿ ಸದಸ್ಯರೆಲ್ಲಾ ಆರೋಗ್ಯಾಧಿಕಾರಿ ಮೇಲೆ ಮುಗಿಬಿದ್ದರು.

ಬೀದಿನಾಯಿಗಳಂತೆ ಬೀಡಾಡಿ ಹಂದಿಗಳ ಕಾಟವು ಹೆಚ್ಚಿದೆ. ಹಂದಿಗಳ ಸಾಗಣೆಗೆ ಅಣ್ಣೇನಹಳ್ಳಿ ಬಳಿ ಜಿಲ್ಲಾಡಳಿತ 4 ಎಕರೆ ಜಾಗ ಗುರುತಿಸಿದೆ. ಹಂದಿ ಸಾಕಾಣಿಕೆ ಮಾಡುವವರು ಅಲ್ಲಿ ಮಾಡಲಿ, ನಮ್ಮ ಅಭ್ಯಂತರವಿಲ್ಲ. ಆದರೆ, ನಗರದ ಎಲ್ಲೆಂದರಲ್ಲಿ ಹಂದಿಗಳು ಓಡಾಡುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗಲಿದೆ. ಹಾಗಾಗಿ ಹಂದಿಗಳನ್ನು ಹಿಡಿದು ಹೊರ ಸಾಗಿಸಲು ಅಗತ್ಯ ಕ್ರಮ ಕೈಗೊಳ್ಳಿ. ಸೈಯದ್ ನಯಾಜ್ ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಬೀದಿನಾಯಿಗಳನ್ನು ಹಿಡಿದ ಸಂಸ್ಥೆಗೆ 16 ರಿಂದ 17 ಲಕ್ಷ ರೂಪಾಯಿ ಪಾವತಿಸಲಾಗಿದೆ. ಇದಂತೂ ಸಂಪೂರ್ಣ ಬೋಗಸ್. ಫಾಗಿಂಗ್, ಇನ್ನೂ ಧೂಳು ತೆಗೆಯುವ ಯಂತ್ರದ ಬಿಲ್ಲಿಂಗ್ ಎಲ್ಲವೂ ಆರೋಗ್ಯ ಶಾಖೆಯಲ್ಲಿ ನಡೆಯುತ್ತಿರುವ ಬೋಗಸ್. ಬಿ.ಜಿ.ಕೃಷ್ಣಪ್ಪ ಮೇಯರ್