ಬಳ್ಳಾರಿ : ಕೇಂದ್ರ ಸರ್ಕಾರದ ಸಿಬಿಐ ಹಾಗೂ ಇಡಿ ತನಿಖಾ ಸಂಸ್ಥೆಗಳ ಭಯದಿಂದ ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಬಿಜೆಪಿಗೆ ಸೇರಿದ್ದಾರೆ ಎಂದು ಶಾಸಕ ಬಿ. ನಾಗೇಂದ್ರ ಹೇಳಿದರು.ನಗರದ ವಾಲ್ಮೀಕಿ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಜನಾರ್ದನರೆಡ್ಡಿ ಕಳೆದ ಕೆಲ ತಿಂಗಳ ಹಿಂದೆ ಕೆಆರ್‌ಪಿಪಿ ಪಕ್ಷದ ಕಟ್ಟಿದ ವೇಳೆ, ಬಿಜೆಪಿ ನಾಯಕರು ಅವರ ಮೇಲೆ ಎಷ್ಟು ಆರೋಪ ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಸಂಡೂರು ಉಪ ಚುನಾವಣೆ ಹಿನ್ನೆಲೆ ಜನಾರ್ದನರೆಡ್ಡಿ ಸಂಡೂರಿನಲ್ಲಿ ಮನೆ ಮಾಡುವುದಾಗಿ ಹೇಳಿದ್ದಾರೆ. ಸಂಡೂರಿನಲ್ಲಿ ಮನೆ ಅಲ್ಲ, ಅರಮನೆ ಮಾಡಲಿ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲುವುದು ಖಂಡಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಹಾಗೂ ಜನಾರ್ದನರೆಡ್ಡಿ ಜತೆಗೆ ನಾನು ಇದ್ದಾಗ ಒಳ್ಳೆಯವನು. ಈಗ ಪಕ್ಷದ ಬದಲಾವಣೆ ಮಾಡಿದ ಕೂಡಲೇ ಕೆಟ್ಟವನಾಗಿರುವೆ ಅಲ್ಲವೇ ಎಂದು ಪ್ರಶ್ನಿಸಿದರು. ಸಂಡೂರು ಹೈ ವೋಲ್ಟೇಜ್ ಕ್ಷೇತ್ರದಲ್ಲಿ, ಚುನಾವಣೆ ಬಳಿಕ ಯಾರಿಗೆ ಎಷ್ಟು ಹೈ ವೋಲ್ಟೇಜ್ ಎಂಬುದು ತಿಳಿಯಲಿದೆ ಎಂದು ಸವಾಲು ಹಾಕಿದರು. ಈ ಉಪ ಚುನಾವಣೆಯಲ್ಲಿ ಬಿಜೆಪಿ ನಾಯಕರು ತಂತ್ರ ಹಾಗೂ ಪ್ರತಿತಂತ್ರ ಹೂಡಿದರೆ, ಕಾಂಗ್ರೆಸ್ ಪಕ್ಷವು ರಣತಂತ್ರ ಮಾಡಲಿದೆ ಎಂದರು. ವಾಲ್ಮೀಕಿ ಸಮುದಾಯದ ಮಗನಾಗಿ ವಾಲ್ಮೀಕಿ ಜಯಂತಿ ದಿನದಂದು ವಾಲ್ಮೀಕಿ ಹಗರಣ ಎನ್ನುವ ಶಬ್ದ ಬಳಸಿ ಮಾತನಾಡುವುದಕ್ಕೆ ಬೇಸರವಾಗುತ್ತಿದೆ. ಕಾಂಗ್ರೆಸ್ ಪಕ್ಷ ಅಥವಾ ನಾನು ಆಗಲಿ ಯಾವುದೇ ಹಗರಣ ಮಾಡಿಲ್ಲ, ಇದೆಲ್ಲ ಬಿಜೆಪಿ ಕುತಂತ್ರ ಎಂದು ಆರೋಪಿಸಿದರು. ಸಿಬಿಐ, ಇಡಿ ತನಿಖಾ ಸಂಸ್ಥೆಗಳನ್ನು ಬಳಸಿ ರಾಜ್ಯ ಸರ್ಕಾರವನ್ನು ಅಸ್ಥಿರ ಮಾಡುವ ಪ್ರಯತ್ನದಿಂದ ನನ್ನನ್ನು ಟಾರ್ಗೆಟ್ ಮಾಡಲಾಗಿತ್ತು. ಕೆಲವೇ ದಿನಗಳಲ್ಲಿ ಈ ಪ್ರಕರಣದ ಆರೋಪದಿಂದ ಮುಕ್ತನಾಗುವೆ ಎಂದರು. ಪ್ರಮುಖರಾದ ಶಾಸಕ ನಾರಾ ಭರತರೆಡ್ಡಿ, ಲಿಡ್ಕರ್ ಅಧ್ಯಕ್ಷ ಮುಂಡ್ರಗಿ ನಾಗರಾಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ ಇದ್ದರು.