ಬಳ್ಳಾರಿ : ಖಿನ್ನತೆಗೊಳಗಾದ ವಿದ್ಯಾರ್ಥಿಗಳು ತಮ್ಮೊಳಗಿನ ಭಯ ಹೋಗಲಾಡಿಸಿ, ಮಾನಸಿಕವಾಗಿ ಸದೃಢರಾಗಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ ಎನ್. ಹೊಸಮನೆ ಹೇಳಿದರು.
ನಗರದ ಹಾನಗಲ್ ಶ್ರೀಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ಪೊಲೀಸ್‌ಇಲಾಖೆ, ಕಾರಾಗೃಹ ಇಲಾಖೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಕೀಲರ ಸಂಘ, ಸಮಾಜ ಕಲ್ಯಾಣ ಇಲಾಖೆ, ಅಬಕಾರಿ ಇಲಾಖೆ, ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜ್ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಸಹಯೋಗದೊಂದಿಗೆ ಆತ್ಮಹತ್ಯೆ ಬಗ್ಗೆ ಇರುವ ಅಭಿಪ್ರಾಯವನ್ನು ಬದಲಿಸಿ ಎಂಬ ಘೋಷ ವಾಕ್ಯದಡಿ ಮಂಗಳವಾರ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಆತ್ಮಹತ್ಯೆ ಘಟನೆಗಳು ನಡೆಯುತ್ತಿದ್ದು, ಅದರಲ್ಲಿ ಹೆಚ್ಚಾಗಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತಮಗಿರುವ ಒತ್ತಡವನ್ನು ತಡೆಯಲು ಹತ್ತಿರದ ಮನೋವೈದ್ಯರೊಡನೆ ಸಮಾಲೋಚನೆ ಮಾಡಿ ಆತ್ಮಹತ್ಯೆಯಿಂದ ದೂರ ಉಳಿಯಬೇಕು. ಮಕ್ಕಳು ಪರೀಕ್ಷೆ-ಫಲಿತಾಂಶಗಳ ಕುರಿತು ಆತಂಕಕ್ಕೆ ಒಳಗಾಗಿ ಆತ್ಮಹತ್ಯೆಗೆ ಪ್ರಚೋದನೆಗೆಗೊಳಗಾಗದೇ ಆತ್ಮಸ್ಥೈರ್ಯದಿಂದ ಎದುರಿಸಬೇಕು ಎಂದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಮಾನಸಿಕ ಖಿನ್ನತೆಗಳಗಾದರೊಡನೆ ಸಮಾಲೋಚನೆ ನಡೆಸಿ ಕಳೆದ ನಾಲ್ಕು ವರ್ಷಗಳಿಂದ 547 ಜನರ ಮನಃಪರಿವರ್ತನೆ ಮಾಡಿ ಆತ್ಮಹತ್ಯೆಯಿಂದ ದೂರಗೊಳಿಸಿರುವುದು ಸಂತಸದ ವಿಷಯವಾಗಿದೆ ಎಂದರು.
ಮನರೋಗ ತಜ್ಞ ಡಾ. ರೋಹನ್ ವನಗುಂದಿ ಮಾತನಾಡಿ, ಜನಸಾಮಾನ್ಯರು ದೈಹಿಕವಾಗಿ ಸದೃಢರಾಗಲು ವ್ಯಾಯಾಮ, ಕಸರತ್ತು, ಡಯಟ್‌ನಂತಹ ಜೀವನ ಶೈಲಿಗೆ ಮೊರೆಹೋಗುತ್ತಾರೆ. ಆದರೆ ಮಾನಸಿಕವಾಗಿ ಆರೋಗ್ಯದಿಂದಿರಲು ಯೋಗ, ಧ್ಯಾನ, ದೃಢವಾದ ಆತ್ಮವಿಶ್ವಾಸ ಹಾಗೂ ಧನಾತ್ಮಕ ಯೋಚನೆಗಳಿಂದ ಮಾತ್ರ ಸಾಧ್ಯ ಎಂದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಕೆ.ಜಿ. ವೀರೇಂದ್ರ ಕುಮಾರ ಮಾತನಾಡಿದರು. ಈ ವೇಳೆ ಆತ್ಮಹತ್ಯೆಗೆ ಕಾರಣ ಖಿನ್ನತೆ ಹಾಗೂ ಟೆಲಿ ಮನಸ್‌ನ ಕರಪತ್ರ ಬಿಡುಗಡೆಗೊಳಿಸಲಾಯಿತು. ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.