ಜಿಲ್ಲೆ

ಭಯ ಹುಟ್ಟಿಸಿದ ಪಿ-705 ರೋಗಿ ಓಡಾಟದ ಮಾಹಿತಿ

ಧಾರವಾಡ: ಇಲ್ಲಿನ ಹೊಸಯಲ್ಲಾಪುರ ಕೋಳಿಕೆರೆಯ ಸೋಂಕಿತ ವ್ಯಕ್ತಿ (ಪಿ 705)ಯ ಪ್ರಯಾಣದ ಇತಿಹಾಸ ಹು-ಧಾ ಅವಳಿ ನಗರದ ಜನರಲ್ಲಿ ಆತಂಕ ಸೃಷ್ಟಿಸುವಂತಿದೆ.

35 ವರ್ಷದ ಈತ ಮೆಣಸಿನಕಾಯಿ ವ್ಯಾಪಾರಿ.

ಸೋಂಕು ದೃಢಪಡುವ ಪೂರ್ವದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ನಗರದ ಪ್ರಮುಖ ಆಸ್ಪತ್ರೆಗಳು ಸೇರಿ, ವಿವಿಧ ಬಡಾವಣೆಗಳಲ್ಲಿ ಸಂಚರಿಸಿದ್ದಾರೆ. ಖಾಸಗಿ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಇವರ ತಪಾಸಣೆ ನಡೆಸಿದ, ಚಿಕಿತ್ಸೆ ನೀಡಿದ ವೈದ್ಯರಲ್ಲಿ ಈಗ ಆತಂಕ ಮನೆ ಮಾಡಿದೆ. ಸೋಂಕಿತ ವ್ಯಕ್ತಿಯು ಮಾ. 5ರಿಂದ 9ರವರೆಗೆ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು, ಮಾ. 9ರಿಂದ 17ರವರೆಗೆ ಸಪ್ತಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಏ. 30 ಹಾಗೂ ಮೇ 1ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮೇ 1ರಂದು ಪುನಃ ಸಪ್ತಾಪುರದ ಆಸ್ಪತ್ರೆಗೆ ತೆರಳಿದ್ದರು. ಬಳಿಕ ಅದೇ ದಿನ ಹುಬ್ಬಳ್ಳಿ ಕಿಮ್ಸ್​ಗೆ ದಾಖಲಾಗಿದ್ದರು.

ಇದಲ್ಲದೆ ಹೊಸಯಲ್ಲಾಪುರ, ಶೀಲವಂತರ ಓಣಿ, ಮುರುಘಾಮಠ, ಕೊಪ್ಪದಕೇರಿ, ಎಂ.ಬಿ.ನಗರ ಹಾಗೂ ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಓಡಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇವರನ್ನು ಸಂರ್ಪಸಿದ ಜನರಿಗೆ ಕರೊನಾ ಸೋಂಕು ತಗಲುವ ಸಾಧ್ಯತೆ ಇದೆ. ಹೀಗಾಗಿ ಆ ಎಲ್ಲ ವ್ಯಕ್ತಿಗಳು ಕೂಡಲೆ ಕರೊನಾ ಸಹಾಯವಾಣಿ (1077)ಗೆ ಕರೆ ಮಾಡಿ ವಿವರಗಳನ್ನು ನೀಡಬೇಕಲ್ಲದೆ, ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕರಾಡಿ ಓಣಿ ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆ: ಕರೊನಾದಿಂದ ಗುಣಮುಖರಾಗಿರುವ ಒಬ್ಬ ವ್ಯಕ್ತಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಶುಕ್ರವಾರ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಕರೊನಾ ಪಾಸಿಟಿವ್ ದೃಢಪಟ್ಟಿದ್ದ ಹುಬ್ಬಳ್ಳಿ ಕರಾಡಿ ಓಣಿಯ ಪಿ- 363 (63 ವರ್ಷ) ಇವರು ಸಂಪೂರ್ಣ ಗುಣಮುಖರಾಗಿದ್ದಾರೆ. 24 ಗಂಟೆಗಳ ಅಂತರದಲ್ಲಿ ಎರಡು ಬಾರಿ ಅವರ ಗಂಟಲ ದ್ರವ ಪರೀಕ್ಷೆ ಮಾಡಿದಾಗ ನೆಗೆಟಿವ್ ವರದಿ ಬಂದಿದೆ. ಎಕ್ಸ್​ರೇ ಮೂಲಕ ಪರೀಕ್ಷೆ ಮಾಡಿ ಶ್ವಾಸಕೋಶದ ತೊಂದರೆ ಇಲ್ಲ ಎಂಬುದನ್ನು ವೈದ್ಯರು ದೃಢಪಡಿಸಿದ್ದರಿಂದ ಇವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 7 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಜಿಲ್ಲೆಯ ಐವರು ಹಾಗೂ ಬಾಗಲಕೋಟೆ ಜಿಲ್ಲೆ ಬಾದಾಮಿಯ ಒಬ್ಬರು ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.