ಎನ್.ಆರ್.ಪುರ: ವಿದ್ಯಾರ್ಥಿಗಳು ಭಯ ಬಿಟ್ಟು ಧೈರ್ಯದಿಂದ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದು ಜೇಸಿ ತರಬೇತುದಾರ ಡಾ. ನವೀನ್ ಲಾಯ್ಡ ಮಿಸ್ಕಿತ್ ಹೇಳಿದರು.
ಬುಧವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಹೇಗೆ ಎಂಬ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು. ಪರೀಕ್ಷೆ ಎದುರಿಸುವ ಮುನ್ನ ವರ್ಷವಿಡೀ ಕಲಿತಿರುವುದನ್ನು ಕ್ರಮಬದ್ಧವಾಗಿ ಪಟ್ಟಿ ಮಾಡಿ ಮನನ ಮಾಡುತ್ತಿರಬೇಕು. ಪರೀಕ್ಷೆಗೆ ಹೆದರಬಾರದು. ಜೀವನದಲ್ಲಿ ದೊಡ್ಡ ಸಾಧನೆ ಮಾಡಲು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮೆಟ್ಟಿಲಾಗಿಸಿಕೊಳ್ಳಬೇಕು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, 18 ರಿಂದ 40 ವರ್ಷದ ಒಳಗಿನ ಯುವಜನರು ಜೇಸಿ ಸದಸ್ಯರಾಗಬಹುದು. ಈ ಶಾಲೆಯಲ್ಲಿ ಮುಂದಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125 ಅಂಕ ಪಡೆದವರನ್ನು ಗುರುತಿಸಿ ತಾಲೂಕು ಕಸಾಪದಿಂದ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕೆಪಿಎಸ್ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಲಕ್ಷ್ಮಣ ಶೆಟ್ಟಿ ಮಾತನಾಡಿ, ಜ್ವಾಲಾಮಾಲಿನಿ ಜೇಸಿ ಸಮಾಜಮುಖಿ ಕೆಲಸ ಮಾಡುತ್ತಿದೆ. ಎಸ್‌ಎಸ್‌ಎಲ್‌ಸಿ ಮಕ್ಕಳು ಹೆಚ್ಚು ಅಂಕ ಗಳಿಸುವ ಸಲುವಾಗಿ ತರಬೇತಿ ನೀಡಿದೆ. ವಿದ್ಯಾರ್ಥಿಗಳು ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ಜ್ವಾಲಾಮಾಲಿನಿ ಜೇಸಿ ಅಧ್ಯಕ್ಷ ಸಾರ್ಥಕ ಗೌಡ, ಎಂ.ಪಿ.ಮನು, ಮಿಥುನ್ ಗೌಡ, ರಾಮಪ್ಪ ಚಲವಾದಿ, ಉದಯ, ಮೇಘನಾ, ಶೆಟ್ಟಿಕೊಪ್ಪ ಜೋಯಿ, ದರ್ಶನ್, ಪವನ್‌ಕರ್, ಸುಹಾಸ್, ಮಂಜುಳಾ ಇದ್ದರು.