ಚಿತ್ರದುರ್ಗ: ಮಹತ್ವಕಾಂಕ್ಷೆಯ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವಿವಿಧೆಡೆ ಪೂರ್ಣಗೊಳ್ಳುವ ಹಂತ ತಲುಪಿದ್ದು, ನಾಲೆಗಳಲ್ಲಿ ನೀರು ಹರಿಸಲು ಪಂಪ್‌ಹೌಸ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ತುರ್ತು ಅಗತ್ಯ ಎದುರಾಗಿದೆ ಎಂದು ಜಿಪಂ ಸಭಾಂಗಣದಲ್ಲಿ ನಡೆದ ಬೆಸ್ಕಾಂ ಕುಂದು-ಕೊರತೆ ಸಭೆಯಲ್ಲಿ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.
ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳದೆ, ಕೊನೆ ಕ್ಷಣದಲ್ಲಿ ವಿದ್ಯುತ್ ನೆಪ ಮುಂದಿಟ್ಟರೆ, ರೈತ ಸಮುದಾಯದ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಗಮನ ಸೆಳೆದರು.
ಈ ಭಾಗದ ಬಹುನಿರೀಕ್ಷಿತ ಯೋಜನೆ ಇದಾಗಿದ್ದು, ನೀರು ಹರಿಸುವ ವೇಳೆ ವಿದ್ಯುತ್ ಸಮಸ್ಯೆ ಉಂಟಾಗಬಾರದು. ವಿಶ್ವೇಶ್ವರಯ್ಯ ಜಲನಿಗಮ ಹಾಗೂ ನೀರಾವರಿ ಇಲಾಖೆ ಇಂಜಿನಿಯರ್‌ಗಳ ಜೊತೆ ಸಭೆ ನಡೆಸಿ, ಅಗತ್ಯ ಸಿದ್ಧತೆ ಮಾಡಿಕೊಳ್ಳಲಿದ್ದೇವೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ಪ್ರತಿಕ್ರಿಯಿಸಿದರು.