ಚಿತ್ರದುರ್ಗ: ಕೇಂದ್ರ ಸರ್ಕಾರದಿಂದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಹಂತ-ಹಂತವಾಗಿ ಬಿಡುಗಡೆಯಾಗಲಿದೆ. ಈ ಕುರಿತು ಅನುಮಾನ ಬೇಡ. ಆದರೆ, ರಾಜ್ಯ ಸರ್ಕಾರ ತಾಂತ್ರಿಕ ಮಾಹಿತಿ ಕೇಂದ್ರಕ್ಕೆ ಸಲ್ಲಿಸಬೇಕಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯೋಜನೆ ಸಂಬಂಧ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜಲಶಕ್ತಿ ಸಚಿವರಿಗೆ ಮನವರಿಕೆ ಮಾಡಲಾಗಿದೆ. ಅನುದಾನ ಕೊಡಿಸುವ ಭರವಸೆ ನೀಡಿದ್ದಾರೆ ಎಂದರು.
ರಾಜ್ಯದ ಹಲವೆಡೆ ಕೇಂದ್ರ ಸರ್ಕಾರ ಕೇಂದ್ರೀಯ ಮಹಾವಿದ್ಯಾಲಯ ತೆರೆದಿದೆ. ಇದರಿಂದ ಬಡ ಮಕ್ಕಳಿಗೆ ಶಿಕ್ಷಣದ ಜತೆಗೆ ವಸತಿ ಸೌಲಭ್ಯ ಸಿಗಲಿದೆ. ಆದರೆ, ಚಿತ್ರದುರ್ಗದಲ್ಲಿಲ್ಲ. ಇಲ್ಲಿಯೂ ತೆರೆಯುವಂತೆ ಕೇಂದ್ರ ಸಚಿವ ಧರ್ಮೇಂದರ್‌ಕುಮಾರ್ ಅವರಿಗೆ ಮನವಿ ಮಾಡಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಹೊಸದುರ್ಗ ರೈಲ್ವೇ ನಿಲ್ದಾಣದಲ್ಲಿ ಹಲವು ರೈಲುಗಳು ಸಂಚರಿಸುತ್ತಿವೆ. ಪ್ರಯಾಣಿಕರ ಒತ್ತಾಯದ ಮೇರೆಗೆ ವಾಸ್ಕೋಡಿಗಾಮ-ಯಶವಂತಪುರ, ಬೆಳಗಾವಿ ವಾಸ್ಕೋಡಿಗಾಮ, ವಿಶ್ವಮಾನವ, ಚಾಲುಕ್ಯ, ಗೋಲಗುಂಬಜ್ ಸೇರಿ ಇತರ ರೈಲುಗಳನ್ನು ನಿಲುಗಡೆ ಮಾಡುವಂತೆ ರೈಲ್ವೇ ಸಚಿವರಾದ ಅಶ್ವಿನ್, ಸೋಮಣ್ಣ ಅವರಲ್ಲಿ ಕೋರಿದ್ದೇನೆ ಎಂದು ತಿಳಿಸಿದರು.
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಸಂಬಂಧ ರಾಜ್ಯ ಸರ್ಕಾರ ಶೇ.80 ರಷ್ಟು ಭೂಸ್ವಾಧೀನ ಮಾಡಬೇಕು. ಅಲ್ಲದೆ, ಶೇ.50ರಷ್ಟು ಅನುದಾನ ನೀಡಬೇಕು. ಆಗ ತ್ವರಿತವಾಗಿ ಕಾರ್ಯಗತಗೊಳಿಸಲು ಸಾಧ್ಯ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವರನ್ನು ಭೇಟಿಯಾಗಿ ಅನುದಾನ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ರಾಜ್ಯ ಇಬ್ಭಾಗವಾಗಲು ಬಿಡೆವು: ಏಕೀಕರಣದ ಫಲವಾಗಿ ಅಖಂಡ ಕರ್ನಾಟಕವಾಗಿದೆ. ಇದಕ್ಕಾಗಿ ಮಹನೀಯರು ಹೋರಾಡಿದ್ದಾರೆ. ಸಾವಿರಾರು ಜನ ಪ್ರಾಣ, ಆಸ್ತಿ ತ್ಯಾಗ ಮಾಡಿದ್ದಾರೆ. ಯಾವ ಕಾರಣಕ್ಕೂ ರಾಜ್ಯ ಇಬ್ಭಾಗವಾಗಲು ಬಿಡುವುದಿಲ್ಲ ಎಂದು ಇಬ್ಭಾಗದ ಹೇಳಿಕೆ ನೀಡಿದ ಸ್ವಾಮೀಜಿ ಹೆಸರು ಪ್ರಸ್ತಾಪಿಸದೆ ಸಂಸದರು ಹೇಳಿದರು.
ಗ್ಯಾರಂಟಿ ಯೋಜನೆಗಳ ವಿರೋಧಿಗಳು ನಾವಲ್ಲ: ಗ್ಯಾರಂಟಿ ಯೋಜನೆಗಳ ವಿರೋಧಿಗಳು ನಾವಲ್ಲ. ಬಡವರು, ಅರ್ಹರಿಗೆ ತಲುಪಲಿ. ಆದರೆ, ಹಳಿ ತಪ್ಪುತ್ತಿರುವ ಕುರಿತು ಸಿಎಂ ಸಿದ್ದರಾಮಯ್ಯ ಎಚ್ಚೆತ್ತುಕೊಂಡು ಉತ್ತಮ ಆಡಳಿತ ನೀಡಬೇಕು ಎಂಬುದು ನಮ್ಮ ಆಶಯ ಎಂದು ಗೋವಿಂದ ಕಾರಜೋಳ ತಿಳಿಸಿದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡರಾದ ಸಂಪತ್‌ಕುಮಾರ್, ಮಾಧುರಿ ಗಿರೀಶ್, ಸುರೇಶ್ ಸಿದ್ದಾಪುರ, ವೆಂಕಟೇಶ್ ಯಾದವ್, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ನವೀನ್ ಚಾಲುಕ್ಯ ಇತರರಿದ್ದರು.