ಜಿಲ್ಲೆ

ಭದ್ರೆಗಾಗಿ ನಾರಿಯರ ಕಣ್ಣೀರು

ಚಿತ್ರದುರ್ಗ: ಜಿಲ್ಲಾದ್ಯಂತ ಮಳೆ-ಬೆಳೆ ಇಲ್ಲ. ಕೆರೆ-ಕಟ್ಟೆ, ಹೊಂಡ-ಬಾವಿ, ಕೊಳವೆಬಾವಿಗಳು ಬತ್ತುತ್ತಿವೆ. ನೀರಾವರಿ ಯೋಜನೆ ಕುಂಠಿತಗೊಂಡಿದೆ. ರೈತರ ಕುರಿತು ಸರ್ಕಾರಕ್ಕೆ ಕಾಳಜಿ ಇಲ್ಲವೆಂದು ಬಿಕ್ಕಿ-ಬಿಕ್ಕಿ ಕಣ್ಣೀರು ಸುರಿಸಿದ ಮಹಿಳೆಯರು. ಬರದಿಂದಾಗಿ ತೋಟಗಳು ಒಣಗುತ್ತಿದ್ದು, ಉಳಿಸಿಕೊಳ್ಳಲು ನೀರು ಕೊಡ್ರಪ್ಪೋ ಎಂಬ ಆಕ್ರಂದನವೂ ಕೇಳಿಬಂದಿತು…

ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಸೇರಿ ವಿವಿಧ ಸಂಘಟನೆಗಳು 19 ದಿನಗಳಿಂದ ಜಿಪಂ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಮುಂದುವರೆಸಿವೆ. ಗುರುವಾರವೂ ಆಳುವ ಸರ್ಕಾರದ ವಿರುದ್ಧ ರೈತ ಮಹಿಳೆಯರ ಆಕ್ರೋಶ ಕಟ್ಟೆ ಹೊಡೆಯಿತು.

ಸಿಎಂ ಸಿದ್ದರಾಮಯ್ಯ ಅವ್ರೇ ಸುಳ್ಳುರಾಮಯ್ಯ ಆಗ್ಬೇಡಿ. ಉಚಿತ ಅಕ್ಕಿಯಂತೂ ಕೊಡ್ಲಿಲ್ಲ. ಗ್ಯಾರಂಟಿಗಳ್ಯಾವು ಬ್ಯಾಡ್ವೇ ಬ್ಯಾಡ. ಭದ್ರಾ ಕಾಮಗಾರಿಗೆ ವೇಗ ನೀಡಿ ಪೂರ್ಣಗೊಳಿಸಿ. ನೀರು ಹರಿಸಿ ಎಂದು ಒತ್ತಾಯಿಸಿದರು.

ಮೊಳಕಾಲ್ಮುರು ತಾಲೂಕಿನ ಸಿದ್ದಯ್ಯನಕೋಟೆ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಮಠ-ಮಾನ್ಯಗಳು ಸೇರಿ ವಿಶ್ವದ ಜನರಿಗೆ ಪ್ರಸಾದ ಸಿಗುತ್ತಿದೆ ಎಂದರೆ, ಅದಕ್ಕೆ ಅನ್ನದಾತರು ಕಾರಣ. ಹೀಗಾಗಿ ಯಾವ ಸರ್ಕಾರವೂ ರೈತ ಸಮುದಾಯವನ್ನು ಕಡೆಗಣಿಸಬಾರದು ಎಂದರು.

ರಾಜ್ಯದ ಹಲವು ಮಠಾಧೀಶರು ತಮ್ಮ ಮಠಕ್ಕಾಗಿ ಸರ್ಕಾರಕ್ಕೆ ಕೋಟಿಗಟ್ಟಲೇ ಅನುದಾನ ಕೇಳುತ್ತಾರೆ. ಅದೇ ರೀತಿ ಜಿಲ್ಲೆಯ ಬಹುದಿನದ ಬೇಡಿಕೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು ಏಕೆ ಒತ್ತಾಯಿಸಬಾರದು. ನೀರಾವರಿಯಿಂದ ಚಿತ್ರದುರ್ಗಕ್ಕೆ ಅನುಕೂಲವಲ್ಲವೇ ಎಂದು ಪ್ರಶ್ನಿಸಿದರು.

ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆಗೊಳಿಸಿದಂತೆ ಕೇಂದ್ರ, ರಾಜ್ಯ ಸರ್ಕಾರ ಮನಸ್ಸು ಮಾಡಿದರೆ, ಇದನ್ನು ಪೂರ್ಣಗೊಳಿಸಲು ಹೆಚ್ಚು ಕಾಲವಕಾಶದ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ರೈತಪರ ದಿಟ್ಟ ನಿಲುವು ತಾಳಲಿ ಎಂದು ಮನವಿ ಮಾಡಿದರು.

ಈಚಘಟ್ಟ ರೈತ ಮಹಿಳೆ ಹನುಮಕ್ಕ ಮಾತನಾಡಿ, ಬಂಗಾರದ ತಟ್ಟೇಲಿ ಉಣ್ಣೋರು ನೀವು. ಸಿಲ್ವರ್ ತಟ್ಟೆ ಕೊಳ್ಳಲು ನಮ್ಮ ಬಳಿ ಹಣವಿಲ್ಲ. ನಮಗೆ ನಿಮ್ಮ ಯಾವ ಗ್ಯಾರಂಟಿ ಬೇಡ. ಭದ್ರಾ ನೀರು ಹರಿಸಿ ಎಂದು ಒತ್ತಾಯಿಸಿದರು.

ಸರ್ಕಾರದ ವಿರುದ್ಧ ಆಕ್ರೋಶ: ಪ್ರಧಾನಿ ನರೇಂದ್ರಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ರಾಜ್ಯದ ಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಇನ್ನಿತರೆ ಜನಪ್ರತಿನಿಧಿಗಳು ಸುಳ್ಳು ಹೇಳಿ ರೈತರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಪದೇ ಪದೆ ನಂಬಿ ಸಂಕಷ್ಟ ಸ್ಥಿತಿ ತಲುಪುತ್ತಿರುವುದು ರೈತರು. ಜಿಲ್ಲೆಗೆ ಭದ್ರಾ ನೀರು ಹರಿಸಿ ಸಮಗ್ರ ನೀರಾವರಿ ಕಲ್ಪಿಸದೆ, ಮತ ಕೇಳೋಕೆ ಬಂದ್ರೆ ಪೊರಕೇಲಿ ಒಡೀತಿವಿ. ಮತದಾನ ಬಹಿಷ್ಕರಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಯಮ್ಮ, ಮೀನಕ್ಕ, ಶೈಲಾ, ಪ್ರೇಮಕ್ಕ, ನೇತ್ರಾವತಿ, ನಿಂಗಮ್ಮ, ಶಿವಮ್ಮ, ಮಂಜುಳಾ, ಬಸಮ್ಮ, ಸಾಕಮ್ಮ, ಹನುಮಕ್ಕ, ಕಾಂತಮ್ಮ, ಪಾರ್ವತಿ, ಅನ್ನಪೂರ್ಣಮ್ಮ, ಶಾಂತಮ್ಮ, ಹಸಿರುಸೇನೆ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ, ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಪದಾಧಿಕಾರಿಗಳಾದ ಬಸವರಾಜಪ್ಪ, ನಿಜಲಿಂಗಪ್ಪ, ರವಿ, ರಂಗಸ್ವಾಮಿ, ಏಕಾಂತಪ್ಪ ಇತರರಿದ್ದರು.