ಜಿಲ್ಲೆ

ಭದ್ರಾವತಿ: ಸ್ವಂತ ಹಣದಲ್ಲಿ ಹಾಸ್ಟೆಲ್ ದುರಸ್ತಿ ಮಾಡಿಸಿದ ಮೇಲ್ವಿಚಾರಕ

ಭದ್ರಾವತಿ: ವಾಸಕ್ಕೆ ಯೋಗ್ಯವಲ್ಲದಂತಹ ಪರಿಸರದಲ್ಲಿದ್ದ ವಸತಿ ನಿಲಯವನ್ನು ಕಾಳಜಿ ಹೊತ್ತು ವೈಯಕ್ತಿಕವಾಗಿ 1.5 ಲಕ್ಷ ರೂ. ಖರ್ಚು ಮಾಡಿ ದುರಸ್ತಿ ಮಾಡಿಸಿರುವ ಮೇಲ್ವಿಚಾರಕ ಸಿ.ಎಂ.ರಮೇಶ್ ಅವರು ಇತರೆ ನೌಕರರು ಹಾಗೂ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಬಸಪ್ಪ ಹೇಳಿದರು.

ಭಾನುವಾರ ಆಯೋಜಿಸಿದ್ದ ಜಟ್‌ಪಟ್ ನಗರದ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಾರ್ಷಿಕೋತ್ಸವ, ವಿದ್ಯಾರ್ಥಿಗಳಿಗೆ ಸ್ವಾಗತ, ಬೀಳ್ಕೊಡುಗೆ, ಕ್ಯಾಂಪಸ್ ಸೆಲೆಕ್ಷನ್ ಆದ ವಿದ್ಯಾಥಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರಿಗೆ ಇಚ್ಛಾಶಕ್ತಿಯಿದ್ದರೆ ಏನೆಲ್ಲ ಮಾಡಬಹುದು ಎಂಬುದನ್ನು ಮೇಲ್ವಿಚಾರಕರು ತೋರಿಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳೆಲ್ಲರೂ ಚೆನ್ನಾಗಿ ಓದಿ ಕ್ಯಾಂಪಸ್ ಸೆಲೆಕ್ಷನ್ ಆಗುವ ಮೂಲಕ ಪಾಲಕರಿಗೆ ನೆರವಾಗಬೇಕು ಎಂದರು.

ಪಶು ಸಂಗೋಪನಾ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಾ. ಆರ್.ಎನ್.ರಾಜಾನಾಯ್ಕ ಮಾತನಾಡಿ, ಸವಾಲುಗಳ ದಿನಗಳಲ್ಲಿ ಬದುಕಿನ ಭರವಸೆಗಳಿಲ್ಲದೆ, ಸಣ್ಣ ವಿಚಾರಗಳನ್ನು ಎದುರಿಸಲಾಗದೆ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವುದು ದುರಂತ ಎಂದರು.