ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಅಡ್ಡಿಯಾಗಿರುವ ಭೂ ಸ್ವಾಧೀನ ಸೇರಿ, ಇನ್ನಿತರೆ ಸಮಸ್ಯೆಗಳ ನಿವಾರಿಸುವ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ 2024ರ ಜ. 2ನೇ ವಾರ ಸಮನ್ವಯ ಸಮಿತಿ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ಶನಿವಾರ ಮಾತನಾಡಿ, ತರಿಕೆರೆ ತಾಲೂಕಿನಲ್ಲಿ ಭೂ ಸ್ವಾಧೀನ ಸಮಸ್ಯೆ ಇದೆ. ಹೀಗಾಗಿ ಸಭೆಯನ್ನು ಚಿತ್ರದುರ್ಗ ಅಥವಾ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಯೋಜಿಸಬೇಕೋ ಎಂಬುದರ ಕುರಿತು ಎರಡೂ ಜಿಲ್ಲೆಗಳ ಶಾಸಕರ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಈ ಯೋಜನೆ ವಿಚಾರವಾಗಿ ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯಾಗಿದೆ. ಶಾಸಕ ರಘುಮೂರ್ತಿ ಸರ್ಕಾರದ ಗಮನ ಸೆಳೆದಿದ್ದಾರೆ. ನಾನೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಜೊತೆ ಚರ್ಚಿಸಿದ್ದು, ಜನವರಿಯಲ್ಲಿ ಸಭೆ ನಿಗದಿಯಾಗಿದೆ ಎಂದರು.
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಯೋಜನೆ ಕುರಿತು ನಾವ್ಯಾರೂ ಉದಾಸೀನ ತೋರಿಲ್ಲ. ಅಧಿಕಾರಿಗಳ ಮೂಲಕ ಶೀಘ್ರ ಕಾರ್ಯನುಷ್ಠಾನಕ್ಕೆ ಒತ್ತಡ ಹೇರಿದ್ದೇವೆ. ಅಬ್ಬಿನಹೊಳಲು ಬಳಿಯ ಭೂ ಸ್ವಾಧೀನ ತೊಡಕು ನಿವಾರಣೆ ಅಲ್ಲಿನ ಶಾಸಕರ ಸಮ್ಮುಖದಲ್ಲಿಯೇ ಆಗಬೇಕಿದೆ. ಹೀಗಾಗಿ ಸಭೆ ಅನಿವಾರ್ಯ ಎಂದು ಹೇಳಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಯೋಜನೆ ಅನುಷ್ಠಾನಕ್ಕೆ ಜಿಲ್ಲೆಯ ಎಲ್ಲ ಶಾಸಕರು ಒಟ್ಟಾಗಿದ್ದೇವೆ. ನೀರಿಗೆ ಮೇಲ್ಬಾಗದ ಅರಸಿಕೆರೆಯವರು ಕಣ್ಣು ಹಾಕುವ ಸಾಧ್ಯತೆಗಳು ಹೆಚ್ಚಿವೆ. ಚಳ್ಳಕೆರೆ, ಮೊಳಕಾಲ್ಮುರು, ಜಗಳೂರು ಭಾಗಕ್ಕೆ ನೀರು ಹರಿಸಲೇಬೇಕು. ಈಗಾಗಲೇ ಹಂಚಿಕೆಯಾಗಿರುವ ನೀರು ಹೊಸದಾಗಿ ಸೇರ್ಪಡೆಯಾಗುವ ತಾಲೂಕಿಗೆ ಹರಿಯದಂತೆ ಎಚ್ಚರ ವಹಿಸಿದ್ದೇವೆ. ಅಗತ್ಯ ಎದುರಾದರೆ, ನ್ಯಾಯಾಲಯದ ಮೊರೆ ಹೋಗಲು ಸಿದ್ಧ ಎಂದು ತಿಳಿಸಿದರು.
ಇದಕ್ಕಾಗಿ ಕೇಂದ್ರ ಘೋಷಿಸಿರುವ 5,300 ಕೋಟಿ ರೂ. ಅನುದಾನ ತರುವ ಕುರಿತು ಸಿಎಂ ಸಿದ್ದರಾಮಯ್ಯ ಆಸಕ್ತಿ ವಹಿಸಿದ್ದಾರೆ. ಈ ಸಂಬಂಧ ಸರ್ವ ಪಕ್ಷಗಳ ನಿಯೋಗ ತೆರಳಲು ಉದ್ದೇಶಿಸಿದ್ದು, ಪ್ರತಿ ಪಕ್ಷದ ನಾಯಕರಲ್ಲಿ ಪ್ರಧಾನಿ ಸಮಯಕ್ಕೆ ವಿನಂತಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಅಬ್ಬಿನಹೊಳಲು ಸಮಸ್ಯೆ ಇತ್ಯರ್ಥವಾಗಿದ್ದರೆ ಇಷ್ಟೊತ್ತಿಗೆ ಹೊಳಲ್ಕೆರೆ ತಾಲೂಕಿನ ಕೆರೆಗಳು ತುಂಬುತ್ತಿದ್ದವು. ಮುಂಬರುವ ಬೇಸಿಗೆಯಲ್ಲಾದರೂ ಕಾಲುವೆ ನಿರ್ಮಾಣದ ಕೆಲಸ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಇಚ್ಚಾಶಕ್ತಿ ಪ್ರದರ್ಶಿಸಬೇಕಿದೆ ಎಂದು ಕೋರಿದರು. ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಇದ್ದರು.