ಎನ್.ಆರ್.ಪುರ ಚಿಕ್ಕಗ್ರಹಾರದ ಅರಣ್ಯ ಇಲಾಖೆ ಕಚೇರಿಯಲ್ಲಿ ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ನೇತೃತ್ವದಲ್ಲಿ ಭದ್ರಾ ಮುಳುಗಡೆ ಸಂತ್ರಸ್ತ ರೈತರು ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಇ.ಶಿವಶಂಕರ್‌ಗೆ ಮನವಿ ಸಲ್ಲಿಸಿದರು. ಇ.ಸಿ.ಜೋಯಿ, ಕೆ.ವಿ.ಸಾಜು, ಅಂಜುಂ ಇತರರಿದ್ದರು.  
ಜಿಲ್ಲೆ

ಭದ್ರಾ ಮುಳುಗಡೆ ಸಂತ್ರಸ್ತ ರೈತರ ಭೂಮಿ ಹಕ್ಕು ಸ್ಥಿರೀಕರಿಸಿ

ಎನ್.ಆರ್.ಪುರ: ಭದ್ರಾ ಮುಳುಗಡೆ ಸಂತ್ರಸ್ತ ರೈತರ ಭೂಮಿ ಹಕ್ಕನ್ನು ಸ್ಥಿರೀಕರಿಸಬೇಕು ಎಂದು ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಹಾಗೂ ಸಂತ್ರಸ್ತ ರೈತರು ಗುರುವಾರ ಚಿಕ್ಕ ಅಗ್ರಹಾರವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಇ.ಶಿವಶಂಕರ್ ಅವರಿಗೆ ಮನವಿ ಸಲ್ಲಿಸಿದರು.

ಲಕ್ಕವಳ್ಳಿಯಲ್ಲಿ 1964ರಲ್ಲಿ ನಿರ್ಮಾಣವಾಗಿರುವ ಭದ್ರಾ ಜಲಾಶಯದ ಹಿನ್ನೀರಿನಿಂದ ತಾಲೂಕಿನ ಹಲವಾರು ಗ್ರಾಮಗಳ ನೂರಾರು ರೈತರ ಜಮೀನು ಮುಳುಗಡೆಯಾಗಿತ್ತು. ಈ ರೈತರಿಗೆ 1964 ರಲ್ಲಿ ಪುನರ್ವಸತಿ ಹಾಗೂ ಪರಿಹಾರ ರೂಪವಾಗಿ ಅರಣ್ಯ ಜಮೀನನ್ನು ತಾಲೂಕಿನ ಕಸಬಾ ಹೋಬಳಿಯ ಮುತ್ತಿನಕೊಪ್ಪ, ಆರಂಬಳ್ಳಿ, ಸಿಂಸೆ, ಬಡಗಬೈಲು, ಹಿಳುವಳ್ಳಿ, ಮೆಣಸೂರು, ಮುತ್ತಿನಕೊಪ್ಪ, ಕೋಣನಕೆರೆ, ಮಡಬೂರು, ಬೈರಾಪುರ, ಶಿರಿಗಳಲೆ ಹಾಗೂ ಬಾಳೆಹೊನ್ನೂರು ಹೋಬಳಿಯ ಮಲ್ಲಂದೂರು, ಬೆಳ್ಳೂರು, ಸಂಕ್ಸೆ, ಹರಾವರಿ, ದಾವಣಅಳೇಹಳ್ಳಿ, ವಗಡೆ, ಗುಬ್ಬಿಗಾ, ಕರ್ಕೇಶ್ವರ, ಹಲಸೂರು, ಮುದುಗುಣಿ ಇತರ ಗ್ರಾಮಗಳ ರೈತರಿಗೆ ಅರಣ್ಯ ಇಲಾಖೆ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿ ಮಂಜೂರು ಮಾಡಲಾಗಿತ್ತು. ಈ ರೈತರು ಜಮೀನನ್ನು ಸ್ವಾಧೀನಕ್ಕೆ ಪಡೆದು ಸಾಗುವಳಿ ಮಾಡಿಕೊಂಡು ಹೆಸರಿನಲ್ಲಿ ಖಾತೆ ಸಹ ಮಾಡಿಸಿಕೊಂಡಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಜಮೀನನ್ನು ಅರಣ್ಯ ಇಲಾಖೆಯಿಂದ ಡಿ.ನೋಟಿಫಿಕೇಷನ್ ಹಾಗೂ ಡಿ ರಿಸರ್ವ್ ಪೂರ್ಣಗೊಳಿಸದ ಕಾರಣ ರೈತರಿಗೆ ಪೂರ್ಣ ಪ್ರಮಾಣದ ಹಕ್ಕು ಪ್ರಾಪ್ತವಾಗಿಲ್ಲ ಹಾಗೂ ಜಮೀನಿನ ಮಾಲಿಕ ಹಕ್ಕು ಇರುವುದಿಲ್ಲ. ಈಗ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದರಿಂದ ರಾಜ್ಯದ ಲಕ್ಷಾಂತರ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಭೂಮಿಯನ್ನು ಕಳೆದುಕೊಂಡ ತಾಲೂಕಿನ ಮುಳುಗಡೆ ಸಂತ್ರಸ್ತರ ಭೂಮಿ ಹಕ್ಕನ್ನು ಸ್ಥಿರೀಕರಿಸಿಕೊಡಬೇಕು ಎಂದು ಅರಣ್ಯ ಇಲಾಖೆಗೆ ಒತ್ತಾಯಿಸಲಾಗಿದೆ.

ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಕೆಡಿಪಿ ಸದಸ್ಯರಾದ ಕೆ.ವಿ.ಸಾಜು, ಅಂಜುಂ, ಪಿಸಿಎಆರ್‌ಡಿ ಬ್ಯಾಂಕ್ ನಿರ್ದೇಶಕ ದೇವಂತರಾಜ್, ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಆದರ್ಶ, ಕಾಂಗ್ರೆಸ್ ಮುಖಂಡ ಬೆನ್ನಿ, ಭದ್ರಾ ಮುಳುಗಡೆ ಸಂತ್ರಸ್ತ ರೈತರಾದ ಸಾರ್ಯ ಸುಬ್ಬೇಗೌಡ, ನಾಗರಾಜ, ರೈತರು ಇದ್ದರು.