ದಾವಣಗೆರೆ: ಭದ್ರಾ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ಹೊಲಗದ್ದೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಉರುಳುಸೇವೆ ನಡೆಸಲಾಯಿತು. ಭದ್ರಾ ನಾಲೆಗಳಿಗೆ ತಕ್ಷಣ ನೀರು ಬಿಡಬೇಕು ಎಂದು ಒತ್ತಾಯಿಸಿದರು.
ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಮಾತನಾಡಿ, ಶಿವಮೊಗ್ಗದ ಕಾಡಾ ಕಚೇರಿಯ ಭದ್ರಾ ನೀರಾವರಿ ಸಲಹಾ ಸಮಿತಿಯಿಂದ ನೂರು ದಿನಗಳ ಕಾಲ ನೀರು ಹರಿಸುವ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಭತ್ತದ ನಾಟಿ ಮಾಡಿದ್ದಾರೆ. ಆದರೆ ಜಲಾಶಯದಿಂದ ನೀರು ನಿಲುಗಡೆಗೊಳಿಸಿದ ಕಾರಣ ಭತ್ತದ ಬೆಳೆ ಒಣಗುತ್ತಿದ್ದರೂ ಸರ್ಕಾರ ಕೈ ಚೆಲ್ಲಿ ಕುಳಿತಿದೆ ಎಂದು ದೂರಿದರು.
ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕಿನ ರೈತರಿಗೋಸ್ಕರ ಜಿಲ್ಲೆಯ ರೈತರಿಗೆ ದ್ರೋಹ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಅವರು ರೈತರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ. ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮಧ್ಯ ಪ್ರವೇಶಿಸಿ ನೀರು ಹರಿಸಲು ಆದೇಶಿಸುವ ಮೂಲಕ ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.
ಮಳೆಯ ಕೊರತೆಯಿಂದ ಜಲಾಶಯದಲ್ಲಿ ಈಗ 43 ಟಿಎಂಸಿ ನೀರಿದ್ದು ರೈತರಿಗೆ ಬೇಕಾಗಿರುವ 15 ಟಿಎಂಸಿ ನೀರು ಕೊಟ್ಟರೆ ಸಾಕು. ರೈತರ ಬದುಕು ಹಸನಾಗುತ್ತದೆ. ಇಲ್ಲದಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ. ಸರ್ಕಾರ ತಕ್ಷಣ ಎಚ್ಚೆತ್ತು ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಕರವೇ ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ, ಮಂಜುಳಾ, ಶಾಂತಮ್ಮ, ಸಾಕಮ್ಮ, ಮಂಜುಳಮ್ಮ, ಎಂ.ರಫೀಕ್, ಬ್ಯಾಟರಿ ಜಬಿವುಲ್ಲ, ಆಟೋ ರಫೀಕ್, ತನ್ವೀರ್, ಜಿ.ಎಸ್.ಸಂತೋಷ್, ಎನ್‌ಬಿಎ ಲೋಕೇಶ್ ಇತರರು ಇದ್ದರು.