ಕಳಸ: ಕಳಸದ ಕೊಳಮಗೆಯಲ್ಲಿ ಭದ್ರಾ ನದಿಗೆ ಪಿಕ್‌ಅಪ್ ವಾಹನ ಸಹಿತ ಬಿದ್ದ ಗಣಪತಿ ಕಟ್ಟೆಯ ಶಮಂತ್‌ಗಾಗಿ ಹುಡುಕಾಟ ಮುಂದುವರಿದಿದೆ.
ಕಳಸ-ಕಳಕೋಡು ರಸ್ತೆಯ ಕೊಳಮಗೆ ರಸ್ತೆ ಪಕ್ಕದಲ್ಲಿ ಭದ್ರಾ ನದಿಗೆ ಶಮಂತ್ (22) ಚಾಲನೆ ಮಾಡುತ್ತಿದ್ದ ವಾಹನ ಗುರುವಾರ ಮಧ್ಯಾಹ್ನ ಬಿದ್ದಿತ್ತು. ಶುಕ್ರವಾರ ಸಂಜೆ ವಾಹನವನ್ನು ನದಿಯಿಂದ ಎತ್ತಲಾಯಿತಾದರೂ ಶಮಂತನ ಸುಳಿವು ಸಿಗಲಿಲ್ಲ.
ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯರು ಸೇರಿ ಶಮಂತನ ಪತ್ತೆಗಾಗಿ ಸಾಕಷ್ಟು ಪ್ರಯತ್ನ ಪಡುತ್ತಿದ್ದರೂ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಯಾರೂ ಗಮನಕೊಡುತ್ತಿಲ್ಲ. ಸ್ಥಳಕ್ಕೆ ಯಾರೂ ಬಂದಿಲ್ಲ. ಬಡವರ ಜೀವಕ್ಕೆ ಬೆಲೆ ಇಲ್ಲವೇ ಎಂದು ಸಾರ್ವಜನಿಕರು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದ್ದರು. ಶನಿವಾರ ಎನ್‌ಡಿಆರ್‌ಎಫ್ ತಂಡ, ಎಸಿ ಸುದರ್ಶನ್, ತಹಸೀಲ್ದಾರ್ ಕಾವ್ಯಾ, ಡಿವೈಎಸ್‌ಪಿ ಬಾಲಾಜಿ ಸಿಂಗ್, ಕಾಂಗ್ರೆಸ್ ಕಳಸ ಅಧ್ಯಕ್ಷ ಶ್ರೇಣಿಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.
ಬೆಳಗ್ಗೆಯಿಂದಲೇ ಅಗ್ನಿಶಾಮಕ ದಳ, ಎನ್‌ಡಿಆರ್‌ಎ್, ಬಣಕಲ್ ಆರ್ೀ ತಂಡ ಹಾಗೂ ಸ್ಥಳೀಯರು ಸೇರಿದಂತೆ ಭದ್ರಾ ನದಿಯಲ್ಲಿ ಶಮಂತನ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಶಮಂತನಿಗಾಗಿ ನದಿಯಲ್ಲಿ ಹುಡುಕುತ್ತಿದ್ದರೆ, ಮಗನ ಕಳೆದುಕೊಂಡ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಮನೆಯಲ್ಲಿ ಶಮಂತನ ಅಣ್ಣ ಹಾಗೂ ಅಪ್ಪ ದಿಕ್ಕೇ ತೋಚದಂತೆ ಕುಳಿತಿದ್ದಾರೆ. ಇದರ ಮಧ್ಯೆ ಮನೆಯಲ್ಲಿರುವ ನಾಯಿ ಮೂರು ದಿನಗಳಿಂದ ಆಹಾರ ಸೇವಿಸದೆ ಮನೆ ಮುಂದೆ ಕಾಯುತ್ತಿರುವುದು ಮನಕಲಕುತ್ತಿದೆ. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಶಮಂತ ಹೋಟೆಲೊಂದಕ್ಕೆ ಕೆಲಸಕ್ಕೆ ಹೋಗಿ ಕೆಲಸ ಮಾಡಿ ಬರುವಾಗ ನಾಯಿಗೆ ಆಹಾರ ತಂದು ಹಾಕುತ್ತಿದ್ದ. ಈಗ ಶಮಂತ ಮತ್ತು ಆತನ ತಾಯಿ ಇಲ್ಲದಿರುವುದರಿಂದ ನಾಯಿ ಆಹಾರ ಸೇವಿಸುತ್ತಿಲ್ಲ.
ಕಳಸ-ಕಳಕ್ಕೋಡು ರಸ್ತೆ ಭದ್ರಾ ನದಿ ಹರಿಯುತ್ತಿದೆ. ಹತ್ತಾರು ಹಳ್ಳಿಗಳಿಗೆ ಹೋಗುವ ರಸ್ತೆ ಇದಾಗಿದೆ. ನಿತ್ಯ ವಾಹನಗಳು ಸಂಚರಿಸುತ್ತವೆ. ಶಾಲಾ ಮಕ್ಕಳನ್ನು ಇದೇ ಮಾರ್ಗದಲ್ಲಿ ವಾಹನಗಳಲ್ಲಿ ಕರೆದುಕೊಂಡು ಹೋಗುತ್ತಾರೆ. ಆದರೆ ರಸ್ತೆ ಪಕ್ಕದಲ್ಲೇ ನದಿ ಹರಿಯುತ್ತಿರುವುದರಿಂದ ರಸ್ತೆ ಅಂಚಿಗೆ ತಡೆಗೋಡೆ ನಿರ್ಮಿಸಿಲ್ಲ. ತಡೆಗೋಡೆ ಇದ್ದಿದ್ದರೆ ಇಂಥ ದುರಂತ ಸಂಭವಿಸುತ್ತಿರಲಿಲ್ಲ. ಆದ್ದರಿಂದ ಅಗತ್ಯ ಇರುವ ಕಡೆಗಳಲ್ಲಿ ತಡೆಗೋಡೆ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.