ಜಿಲ್ಲೆ

ಭದ್ರಾ ನದಿಯಲ್ಲಿ ವಿದ್ಯಾರ್ಥಿ ಶವ ಪತ್ತೆ

ಕಳಸ: ನಾಪತ್ತೆಯಾಗಿದ್ದ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಶ್ರೇಯಸ್‌ನ ಶವ ಭದ್ರಾ ನದಿಯಲ್ಲಿ ಮಂಗಳವಾರ ಪತ್ತೆಯಾಗಿದೆ.

ಕೆಪಿಎಸ್‌ನಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಳೆಹೊಳೆ ವಿದ್ಯಾರ್ಥಿ ಶ್ರೇಯಸ್ ಮಾ.16ರಂದು ಶಾಲೆಗೆಂದು ಮನೆಯಿಂದ ಹೋಗಿದ್ದು ಮರಳಿರಲಿಲ್ಲ. ಈ ಬಗ್ಗೆ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿದ್ಯಾರ್ಥಿ ಪತ್ತೆಗಾಗಿ ಹುಡುಕಾಟ ನಡೆಸಲಾಗಿತ್ತು. ಮಂಗಳವಾರ ಸಂಜೆ ಹಳುವಳ್ಳಿ ಬಳಿ ಭದ್ರಾ ನದಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಶವವನ್ನು ಮೇಲೆತ್ತಿ ಪರಿಶೀಲಿಸಿದಾಗ ಅದು ನಾಪತ್ತೆಯಾಗಿದ್ದ ವಿದ್ಯಾರ್ಥಿಯದೆಂದು ಗುರುತು ಹಿಡಿಯಲಾಯಿತು.

ಶ್ರೇಯಸ್ ಮೂಲತಃ ಹಾಸನ ಜಿಲ್ಲೆ ಬೇಲೂರಿನ ಸುರೇಶ್ ಶೆಟ್ಟಿ ಮತ್ತು ಜಯಂತಿ ಎಂಬುವವರ ಪುತ್ರ. ಬಾಳೆಹೊಳೆಯಲ್ಲಿ ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು ಕಳಸದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಮಾ.16ರಂದು 10ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿ ಇದೆ ಎಂದು ಬೆಳಗ್ಗೆ 7.30ಕ್ಕೆ ಮನೆಯಿಂದ ಹೋಗಿದ್ದ. ಶಾಲೆಯಲ್ಲಿ ಮಧ್ಯಾಹ್ನ 3 ಗಂಟೆಗೆ ತರಗತಿ ಮುಗಿಸಿಕೊಂಡು ಐವರು ಸಹಪಾಠಿಗಳ ಜತೆ ಭದ್ರಾ ನದಿ ತೀರಕ್ಕೆ ಹೋಗಿ ಮದ್ಯಪಾನ ಮಾಡಿ ನಂತರ ಮೂವರು ಬಾಲಕರು ಈಜಲು ನದಿಗೆ ಇಳಿದಿದ್ದಾರೆ. ಶ್ರೇಯಸ್ ನದಿಯಲ್ಲಿ ಮುಳುಗಿದ್ದನ್ನು ಕಂಡು ಉಳಿದ ಐವರು ಸಹಪಾಠಿಗಳು ಆತನ ಶಾಲಾ ಬ್ಯಾಗ್, ಬಟ್ಟೆಯನ್ನು ನದಿಗೆಸೆದು ಏನೂ ತಿಳಿಯದಂತೆ ಮನೆಗಳಿಗೆ ತೆರಳಿದ್ದರು ಎನ್ನಲಾಗುತ್ತಿದೆ.

ಬುಧವಾರ ಕಳಸ ಠಾಣೆಗೆ ಡಿವೈಎಸ್‌ಪಿ ಬಾಲಾಜಿ ಸಿಂಗ್ ಭೇಟಿ ನೀಡಿದರು. ಮೂಡಿಗೆರೆ ಸಿಪಿಐ ರಾಜಶೇಖರ್ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದೆ. ಬಾಲಕನ ಪಾಲಕರು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.