ರಾಣೆಬೆನ್ನೂರ: ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಕಾಲುವೆಗಳಿಗೆ ಭದ್ರಾ ಜಲಾಶಯದಿಂದ ನೀರು ಹರಿಸಲು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಬುಧವಾರ ಯುಟಿಪಿ ಕಾರ್ಯಾಲಯದ ವ್ಯವಸ್ಥಾಪಕ ಸುರೇಶ ಬಿಲ್ಲೆ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ ಮುಂಗಾರು ಬಿತ್ತನೆ ಮಾಡಲಾಗಿದೆ. ಆರಂಭದಲ್ಲಿ ಮಳೆ ಉತ್ತಮವಾಗಿ ಬಂದಿತ್ತು. ಮಳೆ ನಂಬಿಕೊಂಡು ರೈತರು ಬಿತ್ತನೆ ಮಾಡಿದ್ದಾರೆ. ಆದರೆ, ಕಳೆದ ಒಂದು ವಾರದಿಂದ ಮಳೆ ಸಂಪೂರ್ಣ ಮಾಯವಾಗಿದೆ. ಇದೇ ರೀತಿಯಾದರೆ ಬಿತ್ತನೆ ಮಾಡಿದ ಬೀಜಗಳು ಮೊಳಕೆ ಸಹ ಒಡೆಯದ ಪರಿಸ್ಥಿತಿ ನಿರ್ವಣವಾಗಲಿದೆ.
ಸದ್ಯ ರೈತರಿಗೆ ತುಂಗಾ ಮೇಲ್ದಂಡೆ ಕಾಲುವೆ ನೀರಿನ ಅವಶ್ಯಕತೆ ಹೆಚ್ಚಿದೆ. ಆದ್ದರಿಂದ ಯುಟಿಪಿ ಕಚೇರಿ ಅಧಿಕಾರಿಗಳು ಇಲ್ಲಿಯ ರೈತರ ಸಮಸ್ಯೆ ಕುರಿತು ಭದ್ರಾ ಜಲಾಶಯದ ನಿರ್ದೇಶಕರ ಗಮನಕ್ಕೆ ತಂದು ಕೂಡಲೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಕಚೇರಿ ಎದುರು ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಮುಖಂಡರಾದ ನಿಂಗಪ್ಪ ಸತ್ಯಪ್ಪನವರ, ಮಂಜಪ್ಪ ಎಚ್.ಬಿ., ಬ್ರಹ್ಮಾನಂದ ಉಜ್ಜೇರ, ರಮೇಶ ಮಲ್ಲಾಡದ, ಮಂಜಪ್ಪ ಎ.ಬಿ., ದೊಣ್ಣೆಪ್ಪ ಡಿ., ಲಕ್ಷ್ಮಣ ಗುಡಿಹಿಂದ್ಲರ ಮತ್ತಿತರರು ಉಪಸ್ಥಿತರಿದ್ದರು.