ಜಿಲ್ಲೆ

ಭದ್ರಾ, ಕೊಟ್ಟ ಮಾತು ಉಳಿಸಿಕೊಳ್ಳಿ

ಚಿತ್ರದುರ್ಗ: ಭದ್ರಾಮೇಲ್ದಂಡೆ ಯೋಜನೆಗೆ ಘೋಷಿಸಿರುವ 5300 ಕೋಟಿ ರೂ.ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವ ಮೂಲಕ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕೇಂದ್ರವನ್ನು ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುದಾನ ಬಿಡುಗಡೆಗೆ ಇರುವ ತಾಂತ್ರಿಕ ತೊಡಕು ಕುರಿತಂತೆ ರಾಜ್ಯಸರ್ಕಾರ ಸಮರ್ಪಕವಾಗಿ ಉತ್ತರಿಸಿಲ್ಲವೆಂಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮಾತಿನಲ್ಲಿ ಹುರುಳಿಲ್ಲ.
ಯೋಜನೆ ಸಿಇ ಸೇರಿದಂತೆ ರಾಜ್ಯದ ನಮ್ಮ ಅಧಿಕಾರಿಗಳು, ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ ಎಲ್ಲ ಮಾಹಿತಿ ನೀಡಿದ್ದಾರೆ. ಅನುದಾನ ಬಿಡುಗಡೆಗೆ ಯಾವುದೇ ತೊಡಕಿಲ್ಲವೆಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಯೋಜನೆ ಕುರಿತಂತೆ ಆಕ್ಷೇಪ ಅಥವಾ ತಾಂತ್ರಿಕ ಅಸಮರ್ಪಕತೆ ಸಂಬಂಧಿ ಕೇಂದ್ರದಿಂದ ಯಾವುದೇ ಪತ್ರ ಬಂದಿಲ್ಲವೆಂದು ಸಚಿವರು ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ಎಲ್ಲ ಮಾನದಂಡಗಳನ್ನು ಪೂರೈಸಿದ್ದರಿಂದಲೇ ಜಲಶಕ್ತಿ ಸಚಿವಾಲಯದ 14ನೇ ಉನ್ನತ ಸಮಿತಿ,‘ಭದ್ರೆ’ ಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿಗಣಿಸಲು ಶಿಘಾರಸು ಮಾಡಿತ್ತು. ಇದನ್ನು ಆಧರಿಸಿ 2023-24ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಅನುದಾನ ಘೋಷಿಸಿತ್ತು. ಆದರೆ ಇಲ್ಲಿಯವರೆಗೂ ಅನುದಾನ ಬಿಡುಗಡೆ ಆಗದೇ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಇದು ಬರಪೀಡಿತ ಜಿಲ್ಲೆಯ ದುರದೃಷ್ಟ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾಗಿದ್ದ ಗೋವಿಂದ ಎಂ.ಕಾರಜೋಳ ಹಾಗೂ ಹಿಂದಿನ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರು ಅನುದಾನ ಬಿಡುಗಡೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದರೆಂದರು.

ಇಂದಿನಿಂದ ವಿವಿ ಸಾಗರಕ್ಕೆ ನೀರು
ಭದ್ರಾ ಜಲಾಶಯ ಭರ್ತಿಯಾಗಿದ್ದು, ಜು.31 ರಿಂದಲೇ ವಿ.ವಿ. ಸಾಗರಕ್ಕೆ ಪ್ರತಿ ದಿನ 700 ಕ್ಯುಸೆಕ್‌ನಂತೆ ನೀರು ಹರಿಸಲಾಗುವುದು ಎಂದು ಸುಧಾಕರ್ ತಿಳಿಸಿದರು.
ಯೋಜನೆ ಪೂರ್ಣಗೊಳ್ಳದೇ ಇರುವುದರಿಂದ ವಿ.ವಿ.ಸಾಗರದಲ್ಲಿ ಸಂಗ್ರಹಿಸಲು ನಿತ್ಯ 700 ಕ್ಯೂಸೆಕ್‌ನಂತೆ 3 ತಿಂಗಳ ಭದ್ರಾದಿಂದ ವಿವಿ ಸಾಗರಕ್ಕೆ ನೀರು ಹರಿಸಲಾಗುವುದು ಎಂದರು.

ಇಂದು ಕೇಂದ್ರ ವಿತ್ತ ಸಚಿವರ ಭೇಟಿ
ಹೊಸದಿಲ್ಲಿಯಲ್ಲಿ ಜು.31 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭೇಟಿ ಮಾಡಿ, ರಾಜ್ಯದ ನೀರಾವರಿ ಯೋಜನೆಗಳಿಗೆ ಅನುದಾನ ಮಂಜೂರು ಮಾಡುವಂತೆ ಮನವಿ ಸಲ್ಲಿಸಲಿದ್ದಾರೆ. ಭದ್ರಾ ಅನುದಾನದ ಕುರಿತು ಪ್ರಸ್ತಾಪಿಸಲಿದ್ದಾರೆ. ಪ್ರಸ್ತುತ ಭದ್ರಾ ಕಾಮಗಾರಿ ಬಿಲ್ ಬಾಕಿ 2300 ಕೋಟಿ ರೂ.ಗಳನ್ನು ಹಂತ, ಹಂತವಾಗಿ ಪಾವತಿಸಲಾಗುವುದು. ರಾಜ್ಯಸರ್ಕಾರ ಈಗಾಗಲೇ ಬಜೆಟ್‌ನಲ್ಲಿ 1500 ಕೋಟಿ ರೂ.ಅನುದಾನ ಮೀಸಲಿರಿಸಿದೆ. ಹೆಚ್ಚಿನ ಅನುದಾನದ ಅಗತ್ಯ ಬಿದ್ದರೆ ಪೂರಕ ಬಜೆಟ್‌ನಲ್ಲಿ ಹಂಚಿಕೆ ಮಾಡಲಿದೆ ಎಂದರು.
ಉಪ ಮುಖ್ಯ ಇಂಜಿನಿಯರ್ ಸೋಮಶೇಖರ್, ಎಸ್‌ಸಿ ಮಧುಕುಮಾರ್, ಇಇಗಳಾದ ಚಂದ್ರಪ್ಪ ಬಾರಿಕೇರ, ಕೆ.ಟಿ.ಹರೀಶ್ ಇದ್ದರು.