ಚಿಕ್ಕಮಗಳೂರು
ಭದ್ರಾ ಅಭಯಾರಣ್ಯದ ಹುಲಿ ಮೀಸಲು ವ್ಯಾಪ್ತಿ ಲಕ್ಕವಳ್ಳಿ ವಲಯದ ಸಾವೇ ಅರಣ್ಯ ಪ್ರದೇಶದ ಕೂಟ್ ರಸ್ತೆಯಲ್ಲಿ ಅಂದಾಜು ಏಳು ವರ್ಷ ಪ್ರಾಯದ ಹೆಣ್ಣು ಹುಲಿಯೊಂದು ಮೃತಪಟ್ಟಿದೆ. ಎರಡು ಹುಲಿಗಳ ನಡುವಿನ ಕಾದಾಟದಲ್ಲಿ ಹುಲಿ ಮೃತಪಟ್ಟಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕ ಎಂಬAತೆ ಮೃತ ಹುಲಿಯ ದೇಹದಲ್ಲಿ ಕದಾಟದ ಗಾಯಗಳ ಗುರುತು ಪತ್ತೆಯಾಗಿದೆ.
ಎನ್.ಆರ್.ಪುರ ಸರ್ಕಾರಿ ಪಶುವೈದ್ಯ ಶಿವಕುಮಾರ್ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನ ವೈದ್ಯರು ಸಹಕರಿಸಿದರು. ಹುಲಿ ದೇಹದ ಕೆಲವು ತುಣುಕು ಮತ್ತು ರಕ್ತ ಮಾದರಿ ಸಂಗ್ರಹಿಸಿ ಸಾವಿನ ನಿಖರ ಮಾಹಿತಿ ತಿಳಿಯಲು ಉನ್ನತ ಮಟ್ಟದ ಪ್ರಯೋಗಲಕ್ಕೆ ಕಳುಹಿಸಲು ತೀರ್ಮಾನಿಸಲಾಯಿತು.
ಸ್ಥಳದಲ್ಲಿ ಲೋಹ ಪರಿಶೋಧಕ ಯಂತ್ರ ಬಳಸಿ ದೇಹದ ಮೇಲೆ ಲೋಹ, ಮದ್ದು ಗುಂಡು ಯಾವುದಾದರೂ ಇದೆಯೇ? ಎಂದು ಪರಿಶೀಲನೆ ನಡೆಸಲಾಯಿತು. ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮಗಳ ಪ್ರಕಾರ ಸೂಕ್ತ ಕ್ರಮಗಳನ್ನು ಅನುಸರಿಸಿ ಎಲ್ಲ ರೀತಿಯಲ್ಲೂ ಹುಲಿ ಕಳೇಬರ ಪರಿಶೀಲನೆ ಮಾಡಲಾಯಿತು.
ಬಳಿಕ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲೇ ಹುಲಿಯ ಕಳೇಬರ ಸುಡಲಾಯಿತು. ಲಕ್ಕವಳ್ಳಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಸಾಗರ್, ವಲಯ ಅರಣ್ಯಾಧಿಕಾರಿ ಸಂತೋಷ್ ಸೂರಿಮಠ, ಗೌರವ ವನ್ಯಜೀವಿ ಪರಿಪಾಲಕ ಜಿ.ವೀರೇಶ್, ವೈಲ್ಡ್ ಕೇರ್ ಸಂಸ್ಥೆಯ ಮುಖ್ಯಸ್ಥ ಮಧು ಮೂಗ್ತಿಹಳ್ಳಿ, ಶಿವಮೊಗ್ಗದ ವನ್ಯಜೀವಿ ಮಾಜಿ ಪರಿಪಾಲಕ ವಿನಾಯಕ, ಸ್ಥಳೀಯ ಪಂಚಾಯಿತಿ ಪ್ರತಿನಿಧಿಗಳು ಸೇರಿದಂತೆ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು, ಸಿಬ್ಬಂದಿ ಮರಣೋತ್ತರ ಪರೀಕ್ಷೆ ವೇಳೆ ಹಾಜರಿದ್ದರು.