ಜಿಲ್ಲೆ

ಭದ್ರತೆ ನೀಡುವ ಪೊಲೀಸರಿರಲಿ ಸದೃಢ

ಕಲಬುರಗಿ: ದೇಶದ ಭದ್ರತೆ, ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರ ಆರೋಗ್ಯ, ಮಾನಸಿಕ ನೆಮ್ಮದಿ ಅತ್ಯಮೂಲ್ಯವಾಗಿದೆ. ಆದ್ದರಿಂದ ನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹೇಳಿದರು.

ನಗರದ ಡಿಎಆರ್ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡ ಮೂರು ದಿನದ ವಾರ್ಷಿಕ ಕ್ರೀಡಾಕೂಟಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ಪೊಲೀಸರಿಗೆ ನಿತ್ಯ ಯಾವ ಕೆಲಸ ಎದುರಾಗುತ್ತದೆಯೋ ಗೊತ್ತಿರುವುದಿಲ್ಲ. ನಿತ್ಯ ಸಾರ್ವಜನಿಕರ ಕಷ್ಟ ಸುಖದ ಜತೆಗೆ ಬಂದೋಬಸ್ತ್, ಅಪರಾಧ ಪ್ರಕರಣಗಳನ್ನು ತಡೆಯುತ್ತಿರುವುದನ್ನು ಶ್ಲಾಘಿಸಿದರು.

ಬಹುತೇಕ ಇಲಾಖೆಗಳಲ್ಲಿ ಶಿಸ್ತು ಇರುವುದಿಲ್ಲ. ಆದರೆ ಪೊಲೀಸ್ ಇಲಾಖೆ ಸದಾಕಾಲ ಶಿಸ್ತಿನಿಂದ ಇರುತ್ತದೆ. ಪೊಲೀಸರು ಯಾವುದೇ ಪ್ರಕರಣ ಎದುರಿಸಲು ದೈಹಿಕ, ಮಾನಸಿಕ ಆರೋಗ್ಯ ಮುಖ್ಯ. ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಮಾನವ ಸರಪಳಿ ನಿರ್ಮಾಣದಲ್ಲಿ ಶೇ.೮೦ ಪ್ರತಿಶತ ಮಾರ್ಗದಲ್ಲಿ ಪೊಲೀಸರು ಸೇರಿ ಎಲ್ಲ ಇಲಾಖೆಗಳವರು ನಮಗೆ ಸಾಥ್ ನೀಡಿದ್ದರು. ಆದ್ದರಿಂದಲೇ ಮುಖ್ಯಮಂತ್ರಿಗಳಿAದ ಪ್ರಶಸ್ತಿ ದೊರಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಗಿದೆ. ಆರು ತಂಡ ಭಾಗವಹಿಸಲಿವೆ. ಮಾನಸಿಕ ಸದೃಢ ಜತೆಗೆ ಆರೋಗ್ಯ ಕಾಪಾಡಲು ಕ್ರೀಡೆ ಅವಶ್ಯ. ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ನಿತ್ಯದ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳವುದು ಅವಶ್ಯ. ನಿತ್ಯ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ವಶ್ರೇಷ್ಠ ಕ್ರೀಡಾಪಟುವಾಗಿ ಹೊರಹೊಮ್ಮಿದ ಡಿಎಆರ್ ಎಸಿಪಿ ಉದಯಕುಮಾರ ಅವರಿಂದ ಕ್ರೀಡಾಜ್ಯೋತಿ ಸ್ವೀಕರಿಸಲಾಯಿತು.

ಜಿಪಂ ಸಿಇಒ ಭಂವರ ಸಿಂಗ್ ಮೀನಾ, ಹೆಚ್ಚುವರಿ ಎಸ್‌ಪಿ ಎನ್.ಶ್ರೀನಿಧಿ, ಗ್ರಾಮೀಣ ಉಪವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕಿ ಬಿಂದುಮಣಿ ಆರ್.ಎನ್, ಡಿವೈಎಸ್‌ಪಿ ಬಸವೇಶ್ವರ ಹೀರಾ, ಡಿಎಸ್‌ಪಿಗಳಾದ ಸಂಗಮನಾಥ ಹಿರೇಮಠ, ಶಂಕರಗೌಡ ಪಾಟೀಲ್, ಗೋಪಿ ಬಿ.ಆರ್ ಇತರರಿದ್ದರು.