ಬೆಳಗಾವಿ: ರಾಜ್ಯದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ ನಿಯೋಜನೆ ಮೇಲೆ ಸೇವೆ ಸಲ್ಲಿಸುತ್ತಿರುವ ವೈದ್ಯರು ಭತ್ಯೆ ಹೆಸರಿನಲ್ಲಿ 3.50 ಕೋಟಿ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದು, ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಮುಖಂಡ, ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ಆಗ್ರಹಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ ಅಂಕಿತಾಧಿಕಾರಿ, ಸುರಕ್ಷತಾಧಿಕಾರಿ ಕಾರ್ಯಕಾರಿ ಹುದ್ದೆಗಳಲ್ಲಿ ನಿಯೋಜನೆ ಮೇಲೆ 36 ಜನ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ.
ನಿಯಮ ಬಾಹಿರವಾಗಿ ಭತ್ಯೆ ಹೆಸರಿನಲ್ಲಿ 3,50,18,800 ರೂ.ಹಣವನ್ನು ಖಜಾನೆ ಇಲಾಖೆಯಿಂದ ಪಾವತಿಸಿಕೊಂಡಿದ್ದಾರೆ. ಆದರೆ, ಈ ಅಧಿಕಾರಿಗಳು ಸರ್ಕಾರ ನಿಯಮಾವಳಿಗಳಲ್ಲಿ ಭತ್ಯೆ ಪಡೆಯಲ ಅವಕಾಶ ಇಲ್ಲ. ಆದರೂ, ಹಣ ಪಡೆದುಕೊಂಡಿರುವುದು ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ ಎಂದು ದೂರಿದರು.
ವಿಶೇಷ ಭತ್ಯೆ ಪಡೆಯಲು ಅರ್ಹರಲ್ಲ: ಈಗಾಗಲೇ ಆಹಾರ ಇಲಾಖೆಯು 2023ರಲ್ಲಿಯೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ತಮ್ಮ ವೃತ್ತಿಗೆ ಅನುಸಾರವಾಗಿ ಕರ್ತವ್ಯ ನಿರ್ವಹಿಸಿಲ್ಲ.
ಅವುಗಳಿಗೆ ವಿದ್ಯಾರ್ಹತೆ, ತಜ್ಞತೆ, ಕಾರ್ಯ ಸ್ವರೂಪ ಆಧರಿಸಿ ನೀಡಲಾಗುವ ವೈದ್ಯಕೀಯ, ವಿಶೇಷ ಭತ್ಯೆ ಪಡೆಯಲು ಅರ್ಹರಿಲ್ಲ ಎಂದು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ. ಆದರೂ, ಈ ಅಧಿಕಾರಿಗಳಿಗೆ ಕೋಟ್ಯಂತರ ರೂ. ಭತ್ಯ ನೀಡಿರುವುದರ ಹಿಂದೆ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಕೂಡಲೇ ತನಿಖೆಗೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.