ಕಳಸ: ತಾಲೂಕಿನ ಕುದುರೆಮುಖ ಸಮೀಪದ ನೆಲ್ಲಿಬೀಡಿನಲ್ಲಿ ನಾಟಿಗೆ ಸಜ್ಜಾಗಿದ್ದ ಭತ್ತದ ಗದ್ದೆಯಲ್ಲಿ ಭೂ ಕುಸಿತ ಸಂಭವಿಸಿದೆ. ಮನೋಜ್ ಎಂಬುವರ ಗದ್ದೆಯನ್ನು ಎತ್ತುಗಳನ್ನು ಬಳಸಿ ನಾಟಿಗೆ ಹದಗೊಳಿಸಲಾಗಿತ್ತು. ಗುರುವಾರ ಸಂಜೆ 6 ಗಂಟೆಯ ವೇಳೆಗೆ ದೊಡ್ಡ ಶಬ್ದದೊಂದಿಗೆ 60-70 ಅಡಿ ಆಳ ಕಂದಕ ನಿರ್ವಣವಾಗಿದೆ. ಘಟನೆಯಿಂದ ಅಕ್ಕಪಕ್ಕದ ಕೃಷಿಕರು ನಾಟಿ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ.
ಬಣಕಲ್, ಕೊಟ್ಟಿಗೆಹಾರ ಹಾಗೂ ಸುತ್ತಮುತ್ತ ಶನಿವಾರ ಧಾರಾಕಾರ ಮಳೆಯಾಗಿದೆ. ಕೊಟ್ಟಿಗೆಹಾರದಲ್ಲಿ 24 ಗಂಟೆಯಲ್ಲಿ 208 ಮಿಮೀ ಮಳೆಯಾಗಿದೆ. ಮಳೆಯಿಂದಾಗಿ ಹೇಮಾವತಿ ನದಿ ತುಂಬಿ ಹರಿಯುತ್ತಿದೆ. ಚಾರ್ವಡಿ ಘಾಟ್ನ ತೊರೆಗಳು ಮೈದುಂಬಿ ಹರಿಯುತ್ತಿವೆ. ವಾಟೆಕಾನ್ ಸಮೀಪ ಹೆದ್ದಾರಿಗೆ ಮರ ಬಿದ್ದಿದ್ದು ಸ್ಥಳೀಯರು ತೆರವುಗೊಳಿಸಿದರು. ಅಧಿಕ ಮಳೆಯ ಕಾರಣ ಬಣಕಲ್ನ ರಿವರ್, ನಜರೆತ್ ಶಾಲೆಗಳಿಗೆ ರಜೆ ನೀಡಲಾಗಿತ್ತು.