ಶ್ರೀರಂಗಪಟ್ಟಣ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕರಾವಳಿ ಜಿಲ್ಲೆಗಳ ಮಾದರಿಯಲ್ಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಭತ್ತಕ್ಕೆ 500 ರೂ.ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿ ಭತ್ತ ಬೆಳೆಗಾರರ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಜಮಾಯಿಸಿದ ಸಂಘದ ಸದಸ್ಯರು ಹಾಗೂ ಭತ್ತ ಬೆಳೆಯುವ ರೈತರು, ರಾಜ್ಯ ಸರ್ಕಾರ ಮಲತಾಯಿ ಧೋರಣೆ ನಿಲ್ಲಿಸಬೇಕು ಎಂದು ಆಗ್ರಹಿಸಿ ಸರ್ಕಾರದ ವಿರುದ್ಧ ಸಾಲು ಸಾಲು ಘೋಷಣೆ ಕೂಗಿದರು.
ಸಂಘದ ಮುಖಂಡ ಬೆಳಗೊಳ ಸುನೀಲ್ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಭತ್ತ ಬೆಳೆಯುವ ರೈತರಿಗೆ 500 ರೂ.ಬೆಂಬಲ ಬೆಲೆ ನೀಡುವ ಮೂಲಕ ಸರ್ಕಾರ ಬೆಳೆಗಾರರನ್ನು ಪ್ರೋತ್ಸಾಹಿಸುತ್ತಿದೆ. ಇಂತಹ ತಾರತಮ್ಯ ನೀತಿಯನ್ನು ಸರ್ಕಾರ ಕೈಬಿಟ್ಟು ಎಲ್ಲ ರೈತರನ್ನು ಸಮಾನತೆಯಿಂದ ಕಾಣಬೇಕು. ಜತೆಗೆ ಶೀಘ್ರ ಭತ್ತ ಖರೀದಿ ಮಾಡುವ ಜತೆಗೆ ಖರೀದಿಸಿದ ಭತ್ತದ ಹಣವನ್ನು ಬೆಂಬಲ ಬೆಲೆಯೊಂದಿಗೆ ರೈತರಿಗೆ ವಿತರಿಸಬೇಕು.ಈ ವಿಷಯ ಕುರಿತು ಚಳಿಗಾಲದ ಅಧಿವೇಶನದಲ್ಲಿ ವಿಷಯ ಮಂಡಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಳಿಕ ಸ್ಥಳಕ್ಕೆ ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ ಆಗಮಿಸಿ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನಿಸುವ ಭರವಸೆ ನೀಡಿದರು. ರೈತರಾದ ಹೇಮಾ, ಸಂದೇಶ್, ವಿಷಕಂಠು, ಸೋಮಶೇಖರ್, ಹರೀಶ, ರವಿ, ಅರವಿಂದ, ವಿನಯ್, ಪುನೀತ್, ರಜಿನಿಕಾಂತ್, ಶಿವಕುಮಾರ್, ಶಶಿಧರ, ಸಂತೋಷ, ಶ್ರೀನಿವಾಸ ಇತರರು ಭಾಗಿಯಾಗಿದ್ದರು.