ಜಿಲ್ಲೆ

ಭತ್ತ, ರಾಗಿ ಖರೀದಿಗೆ ದರ ನಿಗದಿ

ಚಾಮರಾಜನಗರ: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ 2024-25ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಭತ್ತ ಮತ್ತು ರಾಗಿಯನ್ನು ಖರೀದಿ ಮಾಡಲು ಕೇಂದ್ರ ಸರ್ಕಾರವು ಅನುಮತಿ ನೀಡಿ ದರ ನಿಗದಿಪಡಿಸಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.

ಪ್ರತಿ ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ 2300 ರೂ., ಎ ಗ್ರೇಡ್ ಭತ್ತಕ್ಕೆ 2320 ರೂ. ಹಾಗೂ ರಾಗಿಗೆ 4290ರೂ. ನಿಗದಿಪಡಿಸಲಾಗಿದೆ. ಜಿಲ್ಲೆಗೆ ಭತ್ತ ಮತ್ತು ರಾಗಿಯನ್ನು ಖರೀದಿಸಲು ರಾಜ್ಯ ಸಹಕಾರ ಮಾರುಕಟ್ಟೆ ಮಹಾ ಮಂಡಳಿಯವರನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ.

ಭತ್ತ, ರಾಗಿ ಖರೀದಿಗೆ ಚಾಮರಾಜನಗರ ತಾಲೂಕಿಗೆ ನಗರದ ಎಪಿಎಂಸಿ ಯಾರ್ಡ್ ಆವರಣ ಹಾಗೂ ಸಂತೇಮರಹಳ್ಳಿ ಎಪಿಎಂಸಿ ಯಾರ್ಡ್ ಆವರಣ, ಕೊಳ್ಳೇಗಾಲ ತಾಲೂಕಿಗೆ ಕೊಳ್ಳೇಗಾಲ ಎಪಿಎಂಸಿ ಯಾರ್ಡ್ ಆವರಣ, ಯಳಂದೂರು ತಾಲೂಕಿಗೆ ಟಿಎಪಿಸಿಎಂಎಸ್ ಆವರಣ ಹಾಗೂ ಹನೂರು ತಾಲೂಕಿಗೆ ರಾಗಿ ಖರೀದಿಗೆ ಹನೂರು ಎಪಿಎಂಸಿ ಯಾರ್ಡ್ ಆವರಣದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

ಭತ್ತ ಮತ್ತು ರಾಗಿ ಖರೀದಿ ಮಾಡುವಾಗ ಸರ್ಕಾರವು ನಿಗದಿಪಡಿಸಿದ ಮಾನದಂಡಗಳನ್ವಯ ಎಫ್‌ಎಕ್ಯೂ ಗುಣಮಟ್ಟದ ಭತ್ತ ಮತ್ತು ರಾಗಿಯನ್ನು ಖರೀದಿ ಮಾಡಲಾಗುವುದು. ಭತ್ತ ಬೆಳೆದ ರೈತರು ಕೃಷಿ ಇಲಾಖೆಯ ಫ್ರೂಟ್ಸ್ ದತ್ತಾಂಶದಲ್ಲಿ ಇರುವಂತಹ ರೈತರಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿರುತ್ತದೆ. ರೈತರ ನೋಂದಣಿ ಪ್ರಕ್ರಿಯೆಯು ನ.15 ರಿಂದ 31ರವರೆಗೆ ಇರುತ್ತದೆ. ಡಿ.1ರಿಂದ 2025ರ ಮಾ. 31 ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಡಿಸಿ ಶಿಲ್ಪಾ ನಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.