ಜಿಲ್ಲೆ

ಭತ್ತ ನಾಟಿ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ

ನಾಪೋಕ್ಲು: ಇಲ್ಲಿಗೆ ಸಮೀಪದ ಹಳೇ ತಾಲೂಕು ಅಂಕುರ್ ಪಬ್ಲಿಕ್ ಶಾಲೆಯ ಸೈನ್ಸ್ ಕ್ಲಬ್ ವತಿಯಿಂದ ಭತ್ತದ ನಾಟಿ (ನೇಡುವ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಅಂಕುರ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಕೊಳಕೇರಿ ಗ್ರಾಮದ ಕೆಟೋಳಿರ ರಾಜಾ ಚರ್ಮಣ ಇವರ ಗದ್ದೆಯಲ್ಲಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ಇಳಿದು ನಾಟಿ ಮಾಡುವುದರ ಮೂಲಕ ಭತ್ತದ ಬೇಸಾಯದ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ತಮ್ಮ ಹೊಸ ಅನುಭವವನ್ನು ಹಂಚಿಕೊಂಡರು.

ಶಾಲೆಯ ಕಾರ್ಯದರ್ಶಿ ರತ್ನಾ ಚರ್ಮಣ ಮಕ್ಕಳ ಜತೆಗೆ ಪಾಲ್ಗೊಂಡು ಹೇಗೆ ಭತ್ತದ ಸಸಿ (ಅಗೆ) ತೆಗೆಯುವುದು, ನಾಟಿ ಮಾಡುವುದು, ಕಳೆ ಕೀಳುವುದು, ಭತ್ತ ಬೆಳೆಯುವುದು ಎಂಬುದರ ಬಗ್ಗೆ ಗದ್ದೆಯಲ್ಲಿ ಪ್ರಾತ್ಯಕ್ಷಿಕೆಯನ್ನು ಮಾಡಿ ವಿದ್ಯಾರ್ಥಿಗಳಲ್ಲಿ ಭತ್ತದ ಬೇಸಾಯದ ಬಗ್ಗೆ ಆಸಕ್ತಿ ಮೂಡಿಸಿದರು. ಭೂಮಿಯನ್ನು ಬೇಸಾಯ ಮಾಡದೆ ಬಂಜರು ಬಿಡಬಾರದು ಎಂದು ಮನಮುಟ್ಟುವಂತೆ ಸಮಗ್ರ ಮಾಹಿತಿ ನೀಡಿದರು.

ಶಿಕ್ಷಕಿಯರಾದ ಶೈಲಾ ನರೇಶ್ ಮತ್ತು ಶ್ರುತಿ ಅವರು ಭತ್ತದ ನಾಟಿಯ ಬಗ್ಗೆ ಮಾರ್ಗದರ್ಶನ ಮಾಡಿ ಮಕ್ಕಳಿಗೆ ಕಿವಿಮಾತು ಹೇಳಿದರು.