ಜಿಲ್ಲೆ

ಭತ್ತ ಖರೀದಿ ಕೇಂದ್ರ ಶೀಘ್ರ ತೆರೆಯಿರಿ

ಮಳವಳ್ಳಿ: ಭತ್ತ ಖರೀದಿ ಕೇಂದ್ರವನ್ನು ಶೀಘ್ರ ತೆರೆಯಬೇಕು ಹಾಗೂ ಕೇರಳ ಮಾದರಿಯಲ್ಲಿ ರಾಜ್ಯ ಸರ್ಕಾರ ಪ್ರೋತ್ಸಾಹ ಧನವನ್ನು ಎಂಎಸ್‌ಪಿ ಜತೆಗೆ ಹೆಚ್ಚುವರಿಯಾಗಿ 700 ರೂ. ನೀಡುವ ಮೂಲಕ ಕ್ವಿಂಟಾಲ್ ಭತ್ತಕ್ಕೆ ಕನಿಷ್ಠ 3000 ರೂ.ಬೆಂಬಲ ಬೆಲೆ ನೀಡಬೇಕು ಹಾಗೂ ಅಕಾಲಿಕ ಮಳೆಯಿಂದಾಗಿ ಭತ್ತ ಬೆಳೆಗಾರರ ಸಂಕಷ್ಟಕ್ಕೆ ಒಳಗಾಗಿದ್ದು ಅವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್ ಒತ್ತಾಯಿಸಿದ್ದಾರೆ.

ಸಹಜವಾಗಿ ಜೂನ್, ಜುಲೈನಲ್ಲಿ ಮುಂಗಾರು ಪ್ರಾರಂಭವಾಗಿ ಭತ್ತದ ನಾಟಿ ಮಾಡುತ್ತಾರೆ. ನಂತರ ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಭತ್ತ ಕಟಾವು ಮಾಡುತ್ತಾರೆ. ಕೆಲವು ಸಲ ಮುಂಗಾರು ವಿಳಂಬವಾದರೆ ಜುಲೈ ಆಗಸ್ಟ್‌ನಲ್ಲಿ ನಾಟಿ ಮಾಡಿ ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಕಟಾವು ಮಾಡುತ್ತಾರೆ. ಈ ಪರಿಸ್ಥಿತಿಗೆ ಅನುಗುಣವಾಗಿ ನವೆಂಬರ್ ತಿಂಗಳಲ್ಲೇ ಭತ್ತ ಖರೀದಿ ಕೇಂದ್ರ ತೆರೆಯಬೇಕಾಗಿತ್ತು. ಆದರೆ ಜನವರಿ ಬಂದರೂ ಭತ್ತ ಖರೀದಿ ಕೇಂದ್ರ ತೆರೆಯಲಿಲ್ಲ, ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಇತ್ತ ಕಡೆ ಗಮನ ನೀಡುತ್ತಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಭತ್ತ ಖರೀದಿ ಏಜೆನ್ಸಿಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಕ್ಕೆ ವಹಿಸಿದ್ದಾರೆ. ಆದರೆ ಅವರು ಹೇಳುವ ಪ್ರಕಾರ ಖರೀದಿಗೆ ಸಂಬಂಧಪಟ್ಟಂತೆ ಸಾಫ್ಟ್‌ವೇರ್ ಇನ್ನೂ ತಯಾರಿಸಿಲ್ಲ. ಸಾಗಣೆಗೆ ಟೆಂಡರ್ ಆಗಿಲ್ಲ, ಹಮಾಲಿಗಳು ನಿಗದಿಯಾಗಿಲ್ಲ ಎಂದು ಹೇಳುತ್ತಾರೆ. ಅವುಗಳ ಜತೆಗೆ ಭತ್ತ ಖರೀದಿ ಮಾಡಿದ 15 ದಿನದ ಒಳಗಡೆ ಹಣ ಪಾವತಿ ಮಾಡಬೇಕಾಗಿರುತ್ತದೆ. ಈ ವ್ಯವಸ್ಥೆಯನ್ನು ನೋಡಿದರೆ ಭತ್ತ ಬೆಳೆಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ರಾಜ್ಯ ಸರ್ಕಾರ ದೂಡುತ್ತಿದೆ ಎಂದು ಆರೋಪಿಸಿದರು.

ಮಳವಳ್ಳಿ ತಾಲೂಕಿನಲ್ಲಿ ಸುಮಾರು 23,500 ಎಕರೆಯಲ್ಲಿ ಭತ್ತ ಬೆಳೆದಿದ್ದಾರೆ. ಸುಮಾರು ಏಳು ಲಕ್ಷ ಕ್ವಿಂಟಾಲ್ ಭತ್ತ ಬರುವ ನಿರೀಕ್ಷೆ ಇದೆ. ಈ ಭತ್ತ ಬೆಳೆಯಲು ಈಗಾಗಲೆ ರೈತರು ಬಹಳ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಕಾಲಿಕ ಮಳೆಯಿಂದಾಗಿ ಭತ್ತ ಕಟಾವು ಮಾಡಲು ಆಗುತ್ತಿಲ್ಲ. ಕೂಲಿ ಕಾರ್ಮಿಕರ ಅಭಾವ ಮತ್ತು ಕಟಾವು ಯಂತ್ರಗಳಿಗೆ ದುಬಾರಿ ಬಾಡಿಗೆ ನೀಡಬೇಕಾಗಿದೆ. ಕಟಾವು ವಿಳಂಬವಾಗಿ ಭತ್ತ ಗದ್ದೆಯಲ್ಲಿ ಉದುರಿ ನಷ್ಟವಾಗುತ್ತಿದೆ. ಮಳೆಯಿಂದ ಹುಲ್ಲು ಸಹ ಹಾಳಾಗಿ ನಷ್ಟದ ಜತೆಗೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುತ್ತದೆ.

ಚಂಡಮಾರುತದಿಂದಾಗಿ ಮಳೆ ಕಾರಣದಿಂದ ಭತ್ತದ ಬೆಳೆ ಹಾಳಾಗಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ. ಕೃಷಿ ಇಲಾಖೆ ರೈತರ ನೆರವಿಗೆ ಬಾರದಿರುವುದು ಇವರ ಬೇಜವಾಬ್ದಾರಿಯಾಗಿದೆ. ಇದರ ಬಗ್ಗೆ ತಹಸೀಲ್ದಾರ್ ಸಮೀಕ್ಷೆ ನಡೆಸಿ ನಷ್ಟದ ವಿವರವನ್ನು ಸರ್ಕಾರಕ್ಕೆ ಸಲ್ಲಿಸದೆ ನಮಗೆ ಸಂಬಂಧ ಇಲ್ಲ ಎಂದು ಸುಮ್ಮನೆ ಕುಳಿತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಮಳವಳ್ಳಿ, ಹಲಗೂರು, ಕಿರಗಾವಲು ಸೇರಿದಂತೆ ಹೋಬಳಿ ಕೇಂದ್ರಗಳಲ್ಲಿ ಖರೀದಿ ಕೇಂದ್ರ ತೆರೆಯಬೇಕು. ರಾಜ್ಯ ಸರ್ಕಾರ ಭತ್ತ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸುತ್ತದೆ

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮಳವಳ್ಳಿ ತಾಲೂಕು ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಹಲಗೂರು ಹೋಬಳಿ ಅಧ್ಯಕ್ಷ ಎಂ.ಇ.ಮಹದೇವು, ಮುಖಂಡರಾದ ಹಿಪ್ಜುಲ್ಲಾ, ಸತೀಶ್ ಗುಳಘಟ್ಟ ಮತ್ತಿತರರಿದ್ದರು.