ಚಿತ್ರದುರ್ಗ: ಭಗೀರಥ ಮಹರ್ಷಿ ಸಾಧನೆಯ ದ್ಯೋತಕ. ಅವರ ಆದರ್ಶ ಎಲ್ಲರೂ ಜೀವನದಲ್ಲಿ ಮೈಗೂಡಿಸಿಕೊಂಡರೆ ಸಾಧಕರಾಗಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಗೀರಥ ಮಹರ್ಷಿ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದರು.
ಕಠಿಣ ಪರಿಶ್ರಮಕ್ಕೆ ಭಗೀರಥ ಯತ್ನ ಎಂದೇ ಇಂದಿಗೂ ಜನಮಾನಸದಲ್ಲಿದೆ. ಪೌರಾಣಿಕ ಮಹಾಪುರುಷರಾದ ಅವರು ಸಾಕ್ಷತ್ ಗಂಗೆಯನ್ನು ಧರೆಗಿಳಿಸಿದ ತಪಸ್ವಿ ಎಂದು ಬಣ್ಣಿಸಿದರು.
ಶ್ರಮಜೀವಿಗಳಾದ ಉಪ್ಪಾರ ಸಮಾಜದವರ ಜನಸಂಖ್ಯೆ ರಾಜ್ಯದಲ್ಲಿ ವಿರಳ. ಇತ್ತೀಚೆಗೆ ಸಂಘಟನೆ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲೂ ಸಾಕಷ್ಟು ಸಾಧನೆ ಮಾಡುತ್ತಿದ್ದಾರೆ. ಜಿಲ್ಲೆಯ ಹೊಸದುರ್ಗದಲ್ಲಿ ಸಮುದಾಯದ ಭಗೀರಥ ಮಠವಿರುವುದು ಕೂಡ ಸಂತಸದ ಸಂಗತಿ ಎಂದರು.
ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಎನ್.ವೀರೇಶ್ ಮಾತನಾಡಿ, ಮುಂಬರುವ ದಿನಗಳಲ್ಲಿ ಭಗೀರಥ ಜಯಂತಿಯನ್ನು ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಲ್ಲೂ ಆಚರಿಸಲು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸಮಾಜದ ಮಾಜಿ ಕಾರ್ಯದರ್ಶಿ ಬಸವರಾಜ್, ಪದಾಧಿಕಾರಿಗಳಾದ ಎಲ್.ಮಹೇಶ್, ಎಚ್.ಅಜ್ಜಪ್ಪ, ಎನ್.ತಿಪ್ಪೇಸ್ವಾಮಿ, ಈಶ್ವರ, ಜಗದೀಶ್, ಆರ್.ಮೂರ್ತಿ, ದೇವರಾಜ್, ಅಜ್ಜಯ್ಯ, ಕಲಾವಿದ ವಿರುಪಾಕ್ಷಪ್ಪ, ಜಿಪಂ ಮಾಜಿ ಸದಸ್ಯ ಪಾಪಯ್ಯ, ಮುಖಂಡರಾದ ಅಂಜಿನಪ್ಪ, ಸಿದ್ದಪ್ಪ, ಮಧು, ಮಾದೇಶ, ಗುರುಸಿದ್ದಪ್ಪ, ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಇತರರಿದ್ದರು.