ಜಿಲ್ಲೆ

ಭಗವಾನ್ ಬುದ್ಧನ ತತ್ವಗಳು ಸಾರ್ವಕಾಲಿಕ

ಆಲೂರು: ಸಮಾನತೆ ಸಾರಿದ ಭಗವಾನ್ ಬುದ್ಧನ ತತ್ವಗಳು ಸಾರ್ವಕಾಲಿಕ. ಮೂಢನಂಬಿಕೆ, ಕಂದಾಚಾರಗಳನ್ನು ವಿರೋಧಿಸಿದ ಬುದ್ಧ, ಸಮಾಜದಲ್ಲಿ ಸಮಾನ ಆಶಯಗಳನ್ನು ಬಿತ್ತಿದರು ಎಂದು ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಬೇಡಚವಳ್ಳಿ ಗ್ರಾಮದಲ್ಲಿರುವ ನಳಂದ ಬುದ್ಧ ವಿಹಾರದಲ್ಲಿ ನಳಂದ ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಬುದ್ಧ ಜಯಂತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗೌತಮ ಬುದ್ಧ ಬೌದ್ಧ ಧರ್ಮದ ಮಹಾನ್ ಚಿಂತಕ ಹಾಗೂ ದಾರ್ಶನಿಕ. ಆಸೆಯೇ ದುಃಖಕ್ಕೆ ಮೂಲ ಎನ್ನುವ ಸಿದ್ಧ ಮಂತ್ರವನ್ನು ಜಗತ್ತಿಗೆ ಸಾರಿದ ಗೌತಮ ಬುದ್ಧ, ರಾಜ ಮನೆತನದಲ್ಲಿ ಒಬ್ಬ ರಾಜನ ಮಗನಾಗಿ ಹುಟ್ಟಿ ಸಮಾಜದಲ್ಲಿ ಇದ್ದಂತಹ ದ್ವೇಷ, ಅಸೂಯೆ, ವಾಮಾಚಾರ, ಅಶಾಂತಿ ಇವುಗಳಿಂದ ಮಾನವನ ಜೀವನ ಅಶಾಂತಿಯ ಕಡೆಗೆ ಮುಖ ಮಾಡಿದ್ದು, ಅವುಗಳನ್ನು ಈ ಸಮಾಜದಿಂದ ತೊಡೆದು ಹಾಕಬೇಕು ಎಂಬ ಉದ್ದೇಶದಿಂದ ಪಂಚ ತತ್ವಗಳನ್ನ ಬೋಧಿಸಿದರು ಅವರು ಬೋಧಿಸಿದ ಪಂಚ ತತ್ವಗಳೇ ನಮ್ಮ ಭಾರತದ ಸಂವಿಧಾನದ ಪಂಚಸೀಲ ತತ್ವಗಳಾಗಿ ಅಳವಡಿಕೆಯಾಗಿದೆ. ಅಲ್ಲದೆ ಬೌದ್ಧ ಧರ್ಮವು ವಿಶ್ವದಲ್ಲಿಯೇ ಹೆಚ್ಚು ಪ್ರಚಲಿತವಿರುವ ಪ್ರಸಿದ್ಧ ಧರ್ಮವಾಗಿದ್ದು, ಅಂದಿನ ಕಾಲದಲ್ಲಿಯೇ ಅಶೋಕ ಚಕ್ರವರ್ತಿ ಈ ಧರ್ಮವನ್ನು ಸ್ವೀಕರಿಸುವ ಜತೆಗೆ ಹೆಚ್ಚು ಪ್ರಚಾರಕ್ಕೆ ಒಳಪಡಿಸಿದರು ಎಂಬ ಇತಿಹಾಸವಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರೂ ಬೌದ್ಧ ಧರ್ಮವನ್ನು ಸ್ವೀಕರಿಸಿ ಬೌದ್ಧ ಧರ್ಮದ ಪ್ರಚಾರ ಮಾಡಿದ ಇತಿಹಾಸವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನ್ಯಾನಲೋಕ ಬಂತೇಜಿ ಮಾತನಾಡಿ, ನಾವು ನಡೆಯುವ ದಾರಿ ಸರಿಯಾಗಿದ್ದರೆ, ನಾವು ಮಾಡುವ ಕಾರ್ಯ ಸತ್ಯ ಶುದ್ಧವಾಗಿದ್ದರೆ ಎಂಥಹ ಕಠಿಣ ಪರಿಸ್ಥಿತಿಯನ್ನೂ ಎದುರಿಸಬಹುದು. ಅಹಿಂಸೆಯನ್ನು ಮಾರ್ಗ, ದಾನ ಮಾಡುವುದು, ಸತ್ಯ ಬೋಧನೆ, ಮದ್ಯಪಾನ ಮಾಡದಿರುವುದು ಹಾಗೂ ಶೀಲವಂತನಾಗಿ ಬದುಕುವಂತೆ ಕರೆ ನೀಡಿದರು.

ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಈ ಪಂಚಸೀಲಗಳನ್ನು ಅಳವಡಿಸಿಕೊಂಡರೆ ಈ ಸಮಾಜ ಸುಖ, ಶಾಂತಿ, ನೆಮ್ಮದಿಯಿಯ ಬದುಕಿಗೆ ಸರಳ ಸೂತ್ರವಾಗಿದೆ. ಗೌತಮ ಬುದ್ಧರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡರೆ ಇಡೀ ವಿಶ್ವವೇ ಶಾಂತಿ ಪ್ರಿಯ ರಾಷ್ಟ್ರವಾಗಿ ವಿಶ್ವದ ಎಲ್ಲ ಜನರು ಶಾಂತಿ ನೆಮ್ಮದಿಯಿಂದ ಬದುಕಬಹುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಿಕ್ಷಣರತ್ನ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ವೆಂಕಟೇಶ್, ದಲಿತ ಮುಖಂಡರಾದ ಈರಪ್ಪ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಚಂಚಲಾ ಕುಮಾರಸ್ವಾಮಿ, ಆಲೂರು ನಳಂದ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ಕೆ.ಬಿ.ಗುರುಮೂರ್ತಿ, ಉಪಾಧ್ಯಕ್ಷ ಹರೀಂದ್ರ, ಖಜಾಂಚಿ ಲೋಕೇಶ್, ಸಂಘಟನೆ ಕಾರ್ಯದರ್ಶಿ ರವಿ ಬೇಡುಚವಳ್ಳಿ, ಮಡಿಕೇರಿಯ ಖಜಾನೆ ಇಲಾಖೆ ಉಪ ನಿರ್ದೇಶಕ ರಘುನಾಥ್, ಎಸ್ಸಿ ಎಸ್ಟಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವಾಸುದೇವ್, ಪಟ್ಟಣ ಪಂಚಾಯಿತಿ ಸಿಬ್ಬಂದಿ ಎ.ಎಂ.ಮಂಜುನಾಥ್, ದಲಿತ ಮುಖಂಡರಾದ ಮಲ್ಲಿಗೆವಾಳು ದ್ಯಾವಪ್ಪ, ದೇವರಾಜು, ಬಸವರಾಜ್ ಮತ್ತಿತರರು ಹಾಜರಿದ್ದರು.