ಗುತ್ತಲ: ವೀರಶೈವ ಧರ್ಮ ಪರಂಪರೆಗೆ ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸವಿದೆ. ಲಿಂಗದೀಕ್ಷೆಗೆ ಬಹಳಷ್ಟು ಮಹತ್ವವಿದೆ. ಪ್ರತಿಯೊಬ್ಬ ಮನುಷ್ಯನೂ ಲಿಂಗ ದೀಕ್ಷೆ ಪಡೆಯಬಹುದು ಇದಕ್ಕೆ ಯಾವುದೇ ಜಾತಿ, ಲಿಂಗ ತಾರತಮ್ಯವಿಲ್ಲ ಎಂದು ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು ಹೇಳಿದರು.
ತಾಲೂಕಿನ ನೆಗಳೂರ ಗ್ರಾಮದ ಸಂಸ್ಥಾನ ಹಿರೇಮಠದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರ ಆಯೋಜಿಸಿದ್ದ ವೀರಮಾಹೇಶ್ವರರಿಗೆ ಅಯ್ಯಾಚಾರ, ಭಕ್ತರಿಗೆ ಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೀಕ್ಷೆ ಎನ್ನುವುದಕ್ಕೆ ಬಹಳ ಅರ್ಥವಿದೆ. ದೀಕ್ಷೆ ಎಂದರೆ ‘ದೀ ಯತೆ ಶಿವಜ್ಞಾನಂ ಕ್ಷೀ ಯತೆ ಪಾಶ ಬಂಧನಂ’ ಎಂದು, ಬೇರೆಬೇರೆ ಧರ್ಮಗಳಲ್ಲಿ ಅದರದೇ ನಿಯಮ ಕಟ್ಟುಪಾಡುಗಳಿವೆ. ಆದರೆ, ವೀರಶೈವ ಧರ್ಮದಲ್ಲಿ ಯಾವುದೇ ರೀತಿಯ ಕಠಿಣ ನಿಯಮಗಳಿಲ್ಲ. ನಾವೆಲ್ಲ ಒಂದು, ವಿಶ್ವವೇ ನಮ್ಮ ಬಂಧು ಎಂಬ ಸಂದೇಶ ಸಾರುವ ಧರ್ಮವೇ ವೀರಶೈವ ಧರ್ಮವಾಗಿದೆ. ಲಿಂಗದೀಕ್ಷೆಯು ಭಗವಂತನನ್ನು ಸಾಕ್ಷಾತ್ಕಾರ ಪಡಿಸಿಕೊಳ್ಳುವ ಸಾಧನವಾಗಿದೆ ಎಂದರು.
25 ವೀರಮಾಹೇಶ್ವರರಿಗೆ ಅಯ್ಯಾಚಾರ ಹಾಗೂ 5 ಜನ ಭಕ್ತರಿಗೆ ಲಿಂಗದೀಕ್ಷೆಯನ್ನು ಶ್ರೀಗಳು ಮಂತ್ರೋಪದೇಶ ದೀಕ್ಷಾ ಸಂಸ್ಕಾರ ನೀಡಿದರು. ಇದಕ್ಕೂ ಮುನ್ನ ಮಠದ ಆವರಣದಲ್ಲಿ ವಟುಗಳಿಗೆ ಮಂಗಲಸ್ನಾನ, ಸುರಗಿ ಸಮಾರಾಧನೆ, ಗಂಗಾ, ಗಣಪತಿ, ಪಂಚಕಳಶ ಪೂಜೆ ಹಾಗೂ ಉಭಯ ಶ್ರೀಗಳ ಗದ್ದುಗೆಗಳಿಗೆ ರುದ್ರಾಭೀಷೇಕ ಬಿಲ್ವಾರ್ಚನೆ ಮಹಾ ಮಂಗಳಾರುತಿ, ಜಗದ್ಗುರು ಪಂಚಾಚಾರ್ಯ ವೇದಾಗಮ ಸಂಸ್ಕೃತ ಪಾಠ ಶಾಲಾ ವಟುಗಳಿಂದ ದೀಕ್ಷಾ ಸಂಸ್ಕಾರ ದ ಧಾರ್ವಿುಕ ಪೂಜಾ ವಿಧಾನಗಳು ಜರುಗಿದವು.
ಕಾರ್ಯಕ್ರಮದಲ್ಲಿ ಮೋಟೆಬೆನ್ನೂರ ಚಂದ್ರಶೇಖರ ಶಾಸ್ತ್ರಿಗಳು, ಮಹೇಶಶಾಸ್ತ್ರಿ ಹಾವೇರಿಮಠ, ಗುರುಶಾಂತಸ್ವಾಮಿ ಹಿರೇಮಠ ಹಾಗೂ ಭಕ್ತರು ಪಾಲ್ಗೊಂಡಿದ್ದರು.