ಸೇಡಂ ತಾಲೂಕಿನ ಬೆನಕನಹಳ್ಳಿಯಲ್ಲಿ ಬೆನಕೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ದಿಗ್ಗಾಂವ್‌ದ ಶ್ರೀ ಸಿದ್ಧವೀರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶ್ರೀ ಆನಂದ ದೇವರು, ಶ್ರೀ ಕೇದಾರಲಿಂಗ ದೇವರು ಇತರರಿದ್ದರು. 
ಜಿಲ್ಲೆ

ಭಗವಂತನ ಕೃಪೆಯಿಂದ ನೆಮ್ಮದಿ ಬದುಕು ಪ್ರಾಪ್ತಿ

ಸೇಡಂ: ಬದುಕಿನಲ್ಲಿ ನೆಮ್ಮದಿ ಇದ್ದಾಗ ಮಾತ್ರ ಸಂತಸದಿAದ ಜೀವನ ನಡೆಸಲು ಸಾಧ್ಯ. ಭಗವಂತನ ಕೃಪೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರಿಂದ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ದಿಗ್ಗಾಂವ್ ಪಂಚಗೃಹ ಹಿರೇಮಠದ ಶ್ರೀ ಸಿದ್ಧವೀರ ಶಿವಾಚಾರ್ಯರು ನುಡಿದರು.
ಬೆನಕನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಬೆನಕೋತ್ಸವದ ಧಾರ್ಮಿಕ ಸಭೆಯಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಕಲ್ಯಾಣ ಕರ್ನಾಟಕ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಎಲ್ಲಿಯೂ ಬೆನಕನಳ್ಳಿಯಲ್ಲಿ ನಡೆಯುವಂತೆ ಬೆನಕೋತ್ಸವ ನಡೆಯುವುದಿಲ್ಲ. ಮನುಷ್ಯರಿಗೆ ಮಾತ್ರವಲ್ಲ, ದೇವರಿಗೂ ಕಷ್ಟ ಬಂದಾಗ ಪರಿಹರಿಸುವ ಶಕ್ತಿ ವಿನಾಯಕನಿಗಿದೆ ಎಂದರು.

ಬಸವನ ಬಾಗೇವಾಡಿಯ ಶ್ರೀ ಆನಂದ ದೇವರು ಮಾತನಾಡಿ, ಇಂದಿನ ಯುವಕರು ದುಶ್ಚಟಗಳ ದಾಸರಾಗಿ ಚಿಕ್ಕವವರಿರುವಾಗಲೇ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸಮಾಜ, ದೇಶಕ್ಕೆ ಸೇವೆ ಸಲ್ಲಿಸಬೇಕಾದ ವಯಸ್ಸಿನಲ್ಲಿ ಧೂಮಪಾನ, ಮದ್ಯಪಾನಕ್ಕೆ ದಾಸರಾಗುತ್ತಿದ್ದಾರೆ. ಬೆನಕೋತ್ಸವದಲ್ಲಿ ಎಲ್ಲ ಯುವಕರು ತಮ್ಮಲ್ಲಿನ ದುಶ್ಚಟ ಬಿಡುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಸಿದ್ಧಲಿಂಗೇಶ್ವರ ವಿರಕ್ತ ಮಠದ ಶ್ರೀ ಕೇದಾರಲಿಂಗ ದೇವರು, ಪ್ರಮುಖರಾದ ಅನಂತೇಶ್ವರರೆಡ್ಡಿ ಪಾಟೀಲ್, ಡಾ.ಸದಾನಂದ ಬೂದಿ, ರಾಜುಗೌಡ ಬೆನಕನಹಳ್ಳಿ, ಶಿವಲಿಂಗರೆಡ್ಡಿ ಪಾಟೀಲ್, ಬಸವರಾಜ ಪಾಟೀಲ್, ಗುರುನಾಥ ವಿಶ್ವಕರ್ಮ ಇತರರಿದ್ದರು.
ರಾಜ್ಯಸಭಾ ಮಾಜಿ ಸದಸ್ಯ ಡಾ.ಬವಸರಾಜ ಪಾಟೀಲ್ ಸೇಡಂ, ಡಾ.ಉದಯಕುಮಾರ ಶಹಾ, ಸೋಮನಾಥರೆಡ್ಡಿ ಪೂರ್ಮಾ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.

ಅದ್ದೂರಿ ಮೆರವಣಿಗೆ: ಬೆನಕನಹಳ್ಳಿಯಲ್ಲಿ ಪ್ರತಿಷ್ಠಾಪಿಸಿದ ಬೆನಕನ ವಿಸರ್ಜನೆ ಮೆರವಣಿಗೆ ಶನಿವಾರ ಅದ್ದೂರಿಯಾಗಿ ನಡೆಯಿತು. ಗಣೇಶ ಚೌತಿಯಂದು ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸಿದ್ದು, ನಿತ್ಯ ವಿಶೇಷ ಪೂಜೆ ನಡೆಸಲಾಯಿತು. 21ನೇ ದಿನವಾದ ಶನಿವಾರ ಗ್ರಾಮದ ಮುಖ್ಯ ರಸ್ತೆಗಳ ಭವ್ಯ ಮೆರವಣಿಗೆ ಜರುಗಿತು. ದಾರಿಯುದ್ದಕ್ಕೂ ಕೋಲಾಟ, ಯುವಕರಿಂದ ಭಜನೆ ಜರುಗಿತು. ಬಳಿಕ ಬಾವಿಯಲ್ಲಿ ಗಣಪನನ್ನು ವಿಸರ್ಜನೆ ಮಾಡಲಾಯಿತು.