ಜಿಲ್ಲೆ

ಭಗವಂತ ಒಲಿದರೆ ಯಾವ ಕೆಲಸವೂ ನಿಲ್ಲಲ್ಲ

ಕಲಬುರಗಿ: ನಗರದ ರಾಮಮಂದಿರ ರಿಂಗ್ ರಸ್ತೆಯಲ್ಲಿರುವ ಆರ್‌ಟಿ ನಗರದ ಉತ್ತರಾದಿ ಮಠದ ನಿವೇಶನದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀಕರ ತೀರ್ಥ ಬಾವಿಯನ್ನು ಮಂಗಳವಾರ ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಗಳು ಉದ್ಘಾಟಿಸಿದರು.
ಶ್ರೀಕರ ತೀರ್ಥ ಉದ್ಘಾಟನೆ ಹಾಗೂ ಮೂಲ ರಾಮ ದೇವರ ಸಂಸ್ಥಾನ ಪೂಜೆ ನೆರವೇರಿಸಿ ಭಕ್ತರನ್ನು ಉದ್ದೇಶಿಸಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಭಗವಂತ ಇಲ್ಲಿ ನಡೆಯಲಿರುವ ಮುಂದಿನ ಕಾಮಗಾರಿ, ಮಂದಿರ ನಿರ್ಮಾಣ ಸೇರಿದಂತೆ ಸತ್ಕಾರ್ಯಗಳಿಗಾಗಿ ಎಲ್ಲ ಭಗವದ್ಭಕ್ತರಿಗೆ ಪ್ರೇರಣೆ ನೀಡಲಿ ಎಂದು ಅನುಗ್ರಹಿಸಿದರು.

ಶ್ರೀಕರ ನಾರಾಯಣ ಎಂದರೆ ಲಕ್ಷ್ಮೀಪತಿ ನಾರಾಯಣ. ಭಗವಂತ ಒಲಿದ ಮೇಲೆ ಯಾವ ಕೆಲಸಗಳು ನಿಲ್ಲುವುದಿಲ್ಲ. ಹೀಗಾಗಿ ಬಾವಿಯಾಗಿದೆ. ಗಂಗಾದೇವಿ ಪ್ರತ್ಯಕ್ಷಳಾಗಿದ್ದಾಳೆ. ಮುಂದಿನ ಕೆಲಸಗಳನ್ನು ಬಡಾವಣೆಯ ಭಗವದ್ಭಕ್ತರು, ನಗರದ ಎಲ್ಲ ಬಡಾವಣೆಗಳ ದಾನಿಗಳು ಸೇರಿ ಯೋಜನೆ ರೂಪಿಸಿ ಮುಂದಡಿ ಇಡುವಂತೆ ಶ್ರೀಗಳು ಹರಸಿದರು.

ವಿವಿಧೆಡೆ ತಪ್ತ ಮುದ್ರಾಧಾರಣೆ: ನಗರದ ಬ್ರಹ್ಮಪುರದಲ್ಲಿನ ರುಕ್ಮಿಣಿ ಪಾಂಡುರAಗ ಮಂದಿರದ ಪ್ರಾಂಗಣದಲ್ಲಿ ಮಂಗಳವಾರ ಬೆಳಗ್ಗೆ ಸೇರಿದ್ದ ಸಾವಿರಾರು ಭಕ್ತರಿಗೆ ಚಾತುರ್ಮಾಸ್ಯ ಪರ್ವಕಾಲದ ತಪ್ತ ಮುದ್ರಾಧಾರಣೆಯನ್ನು ಶ್ರೀ ಸತ್ಯಾತ್ಮತೀರ್ಥರು ಮಾಡಿದರು. ನಂತರ ಬಸವೇಶ್ವರ ಕಾಲನಿ ರಾಯರ ಮಠ, ಪ್ರಶಾಂತ ನಗರದ ಮಾರುತಿ ಮಂದಿರ, ಜೇವರ್ಗಿ ಕಾಲನಿ ರಾಘವೇಂದ್ರ ಸ್ವಾಮಿ ಮಠದಲ್ಲಿಯೂ ಸೇರಿದ್ದ ಸಾವಿರಾರು ಭಕ್ತರಿಗೆ ಶ್ರೀಗಳು ಮುದ್ರಾ ಹಾಕಿ ಮಂತ್ರಾಕ್ಷತೆ ನೀಡಿ ಹರಸಿದರು.

ಗುರುವಂದನೆಯ ಸಂಭ್ರಮ: ಗುರು ಪೂರ್ಣಿಮೆ ರಾತ್ರಿಯೇ ಕಲಬುರಗಿಗೆ ಬಂದಿಳಿದ ಶ್ರೀ ಸತ್ಮಾತ್ಮತೀರ್ಥರಿಗೆ ಇಲ್ಲಿನ ಬ್ರಹ್ಮಪುರ ಉತ್ತರಾದಿ ಮಠದಲ್ಲಿ ಸತ್ಯಾತ್ಮ ಸೇನೆಯ ಕಾರ್ಯಕರ್ತರು ವಿಶೇಷ ಗುರುವಂದನೆ ನಡೆಸಿದರು. ವೈಭವದಿಂದ ಜರುಗಿದ ಸಮಾರಂಭದಲ್ಲಿ ಶ್ರೀಗಳು ತಮ್ಮ ಗುರುಗಳಾದ ಸತ್ಯಪ್ರಮೋದ ತೀರ್ಥರ ಪಾದುಕೆಗಳೊಂದಿಗೆ ಪಾಲ್ಗೊಂಡಿದ್ದರು. ನಗರದ ಪಂಡಿತರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳ ದರ್ಶನಾಶೀರ್ವಾದ ಪಡೆದರು.