ಜಿಲ್ಲೆ

ಭಕ್ತೋತ್ಸಾಹಕ್ಕೆ ಸಾಕ್ಷಿಯಾದ ಅಯ್ಯಪ್ಪನ ಲಕ್ಷ ದೀಪೋತ್ಸವ

ಚಿತ್ರದುರ್ಗ: ದೀಪ ಹಚ್ಚುವ ಕ್ಷಣಕ್ಕಾಗಿ ಜಮಾಯಿಸಿದ್ದವರ ತವಕ ಹೆಚ್ಚಾಯಿತು. ಸಂದೇಶ ದೊರಕುತ್ತಿದ್ದಂತೆ ಗಂಟೆಗಟ್ಟಲೇ ಕಾಯುತ್ತ ನಿಂತವರಿಂದ ಸಹಸ್ರಾರು ಅಣತೆಗಳು ಮಿನುಗುವ ನಕ್ಷತ್ರದಂತೆ ಕಂಗೊಳಿಸಿದವು. ಹಲವರು ಭಕ್ತಿಯ ಪರಾಕಾಷ್ಠೆಯಲ್ಲೂ ಮಿಂದೆದ್ದರು...

ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನಿಂದ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ 25ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಮೆದೇಹಳ್ಳಿ ರಸ್ತೆಯಲ್ಲಿರುವ ಸ್ವಾಮಿಯ ದೇಗುಲ ಮುಂಭಾಗದ ಆವರಣ ಭಕ್ತೋತ್ಸಾಹಕ್ಕೆ ಸಾಕ್ಷಿಯಾಯಿತು. ಇದೇ ವೇಳೆ ಸಾವಿರಾರು ಭಕ್ತರು ಸಾಲು-ಸಾಲು ದೀಪಗಳನ್ನು ಹಚ್ಚಿ ಭಕ್ತಿ ಸಮರ್ಪಿಸಿದರು.

ಹೆಚ್ಚು ಜನ ಸೇರುವ ನಿರೀಕ್ಷೆ ಹಿನ್ನಲೆಯಲ್ಲಿ ಬ್ಯಾರಿಕೇಡ್, ಪೋಲ್ಸ್‌ಗಳನ್ನು ಅಳವಡಿಸಲಾಗಿತ್ತು. ಸರತಿ ಸಾಲಿನ ಮೂಲಕ ಸ್ವಾಮಿಯ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲದೆ, ವಾಹನಗಳ ನಿಲುಗಡೆಗೂ ದೇಗುಲ ಸಮೀಪ ಅವಕಾಶವಿತ್ತು.

ಕಂಗೊಳಿಸಿದ ಮೂರ್ತಿ, ದೇಗುಲ: ಮುಂಜಾನೆಯಿಂದಲೇ ಅಯ್ಯಪ್ಪಸ್ವಾಮಿಗೆ ತುಪ್ಪ, ಗಂಧ, ಎಳನೀರು, ಅರಿಶಿಣ-ಕುಂಕುಮ, ತೈಲಾಭಿಷೇಕ ಸೇವೆ ನೆರವೇರಿತು. ಶಬರಿಮಲೆ ಮಾದರಿಯಲ್ಲೇ ಪೂಜಾ ವಿಧಿ-ವಿಧಾನಗಳು ನೆರವೇರಿದ ನಂತರ ಸ್ವಾಮಿಗೆ ಆಭರಣ, ಪುಷ್ಪಗಳಿಂದ ವಿಶೇಷವಾಗಿ ಅರ್ಚಕರು ಅಲಂಕರಿಸಿದ್ದರು. ಇಡೀ ದೇಗುಲ ಆವರಣ ಹೂವು, ದೀಪಾಲಂಕಾರದೊಂದಿಗೆ ಕಂಗೊಳಿಸಿತು.

ಸಂಜೆ 6 ರಿಂದ ರಾತ್ರಿ 11ರ ವರೆಗೂ ದರ್ಶನಕ್ಕಾಗಿ ಜನಸಾಗರವೇ ಹರಿದು ಬಂದ ಕಾರಣ ಭಕ್ತರು ಗಂಟೆಗಟ್ಟಲೇ ಕಾದರು. ಅಯ್ಯಪ್ಪಸ್ವಾಮಿಯ ಜೊತೆ ಗಣಪತಿ, ಸುಬ್ರಮಣ್ಯ, ಭೀಮಶಂಕರ, ಭೀಮಾಂಜನೇಯ ಸ್ವಾಮಿ ಮೂರ್ತಿಗಳನ್ನು ಕಣ್ತುಂಬಿಕೊಂಡರು. ಮಹಾಮಂಗಳಾರತಿ, ತೀರ್ಥ ಪಡೆದು ಇಷ್ಟಾರ್ಥ ಈಡೇರಿಸುವಂತೆ ಹಲವರು ಸ್ವಾಮಿಯಲ್ಲಿ ಪ್ರಾರ್ಥಿಸಿಕೊಂಡರು. ನೆರೆದಿದ್ದ ಭಕ್ತಗಣಕ್ಕೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಎಂ.ಕಾರಜೋಳ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಎಂಎಲ್ಸಿ ಕೆ.ಎಸ್.ನವೀನ್ ದೀಪೋತ್ಸವ ಉದ್ಘಾಟಿಸಿದರು. ಟ್ರಸ್ಟ್‌ನ ಅಧ್ಯಕ್ಷ ಶರಣ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಕೆ.ಸಿ.ನಾಗರಾಜ್, ದೇಗುಲದ ಪ್ರಧಾನ ಅರ್ಚಕ ಸತೀಶ್ ಶರ್ಮಾ, ಮರ್ಚೆಂಟ್ ಬ್ಯಾಂಕ್‌ನ ಅಧ್ಯಕ್ಷ ಎಸ್.ಆರ್.ಲಕ್ಷ್ಮೀಕಾಂತ್‌ರೆಡ್ಡಿ, ಟಿ.ಮಹಾಂತೇಶ್, ಎಚ್.ಎಂ. ದ್ಯಾಮಣ್ಣ, ಉದಯ್ ಶೆಟ್ಟಿ, ಅರುಣ್‌ಕುಮಾರ್, ದೀಪಾನಂದ, ಎಂ.ಎಸ್.ಪ್ರಾಣೇಶ್, ಸಿ.ಅಶೋಕ್, ವಿಜಯಕುಮಾರ್ ಇತರರಿದ್ದರು.

ಹಿನ್ನೆಲೆ ಗಾಯಕಿ ಮಾಲಿನಿ ಕೇಶವ ಪ್ರಸಾದ್, ಮಂಗಳೂರಿನ ಸುರಭಿ ಸೌಂಡ್ ಸಿಸ್ಟಮ್ ತಂಡದವರು ಭಕ್ತಿ ಕುಸುಮಾಂಜಲಿ ನಡೆಸಿಕೊಟ್ಟರು.