ಹುಬ್ಬಳ್ಳಿ: ಮನುಷ್ಯ ಭಕ್ತಿ, ಜ್ಞಾನ ಮತ್ತು ವೈರಾಗ್ಯದ ತ್ರಿವೇಣಿ ಸಂಗಮವಾಗಿರಬೇಕು. ಭಕ್ತಿಯಲ್ಲಿ ಅಜ್ಞಾನ ಪ್ರದರ್ಶಿಸಬಾರದು ಹಾಗೂ ಜ್ಞಾನದಿಂದ ಅಹಂಕಾರ ಬರಬಾರದು ಎಂದು ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ನುಡಿದರು.
ಭಾನುವಾರ ಸಂಜೆ ವಿಶ್ವೇಶ್ವರ ನಗರದ ಶ್ರೀ ಲಕ್ಷ್ಮಿ ನರಸಿಂಹ, ಶ್ರೀ ಮುಖ್ಯಪ್ರಾಣ, ಶ್ರೀ ಸುಬ್ರಹ್ಮಣ್ಯ, ಶ್ರೀ ಶನಿದೇವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸ್ಕಂದ ಷಷ್ಠಿ ಹಾಗೂ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಜೀವನ ದರ್ಶನ ಪ್ರವಚನ ನೀಡಿದರು.
ಭಕ್ತಿ ಮತ್ತು ಜ್ಞಾನ ತುಂಬಾ ಶಕ್ತಿಶಾಲಿಯಾದದ್ದು. ಜ್ಞಾನ ಇದ್ದವನಿಗೆ ಅಹಂಕಾರ ಬಂದೇ ಬರುತ್ತದೆ. ಅಹಂಕಾರ ಬರಬಾರದು ಎನ್ನುವುದಾದರೆ ವೈರಾಗ್ಯ ಹೊಂದಿರಬೇಕು. ಮನುಷ್ಯ ಸುಖ-ದುಃಖವನ್ನು ಸಮಾನವಾಗಿ ಅನುಭವಿಸುತ್ತಾನೆ. ಮನಸ್ಸು ಇದ್ದ ಮೇಲೆ ನೋವು ಇದ್ದೇ ಇರುತ್ತದೆ. ಮನಸ್ಸಿಗೆ ನೋವಾದ ಸಂದರ್ಭದಲ್ಲಿ ದೇವರ ಸ್ಮರಣೆ ಮಾಡಿಕೊಳ್ಳಿ. ಮನಸ್ಸು ಪ್ರಸನ್ನವಾಗುತ್ತದೆ ಎಂದರು.
ದೇವರಿಗೆ ಸಮಾನವಾದುದು ಯಾವುದೂ ಇಲ್ಲ. ಗುಡಿಯಲ್ಲಿ, ದೇವರ ಸನ್ನಿಧಾನದಲ್ಲಿ ಇರುವಾಗ ನಮ್ಮ ಮನಸ್ಸು ಎಷ್ಟು ನಿರ್ಮಲವಾಗಿರುತ್ತದೆಯೋ ಬೇರೆಡೆ ಇದ್ದಾಗಲೂ ಅಷ್ಟೇ ನಿರ್ಮಲವಾಗಿರಬೇಕು. ನಾವು ಇದ್ದಲ್ಲಿ ದೇವರು ಬರುವಂತೆ ಪ್ರಯತ್ನ ಮಾಡಬೇಕು. ದೇವರಲ್ಲಿ ತನಗಾಗಿ ಪ್ರಾರ್ಥನೆ ಮಾಡುವುದು ಸ್ವಾರ್ಥ. ಅನ್ಯರ ಒಳಿತಿಗಾಗಿ ಪ್ರಾರ್ಥನೆ ಮಾಡುವುದು ಪರಾರ್ಥ. ಅನ್ಯರಿಗೆ ಎಲ್ಲವೂ ಕೊಟ್ಟು ಮುಗಿದ ಮೇಲೆ ನನಗೊಂದಿಷ್ಟು ಕರುಣಿಸು ಎಂದು ದೇವರಲ್ಲಿ ಪ್ರಾರ್ಥಿಸಿ ಎಂದು ಹೇಳಿದರು.
ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ ಮಾತನಾಡಿ, ಪೂಜೆ ಮಾಡುವಾಗ ಚಿತ್ತ ಒಂದು ಕಡೆ, ದೇಹ ಒಂದು ಕಡೆ ಇರಬಾರದು. ದೇವರಿಗೆ ಸಮರ್ಪಣಾ ಭಾವದಿಂದ ನಮ್ಮನ್ನು ನಾವು ಅರ್ಪಿಸಿಕೊಳ್ಳಬೇಕು ಎಂದು ನುಡಿದರು. ಮುದ್ದೇಬಿಹಾಳ ಕುಂಟೋಜಿ ಗ್ರಾಮದ ಶ್ರೀ ಚೆನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದೇವಸ್ಥಾನದ ಧರ್ಮಾಧಿಕಾರಿ ರಾಘವೇಂದ್ರ ಆಚಾರ್ಯ ಮಣ್ಣೂರ, ಪಂ. ಸಮೀರ ಆಚಾರ್ಯ ಮಣ್ಣೂರ, ಗುರುಸಿದ್ದಪ್ಪ ಹೊಸಮನಿ, ಇತರರು ಇದ್ದರು.